ರಾಗಾಂತರಂಗ ಕಾರ್ಯಕ್ರಮ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಕುಮಟಾ

ಜಂಜಾಟದ ಬದುಕಿನಲ್ಲಿ ನೆಮ್ಮದಿಗೆ ಸಂಗೀತದ ಅಗತ್ಯವಿದೆ. ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಸಂಗೀತದ ಪಾತ್ರ ದೊಡ್ಡದು. ಹೀಗಾಗಿ ಶಾಲಾ ಪಠ್ಯದಲ್ಲಿ ಸಂಗೀತ ವಿಷಯ ಅಳವಡಿಸಿದರೆ ಪ್ರತಿ ಮಗುವೂ ಸಂಸ್ಕಾರವಂತ ಪ್ರಜೆಯಾಗುತ್ತದೆ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು.

ಹಳದೀಪುರದ ಸಂಕೊಳ್ಳಿಯ ಸತ್ವಾಧಾರ ಫೌಂಡೇಶನ್ ಮುಂದಾಳತ್ವದಲ್ಲಿ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ರಾಗಾಂತರಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅತಿಥಿ ವಿನಾಯಕ ಹೆಗಡೆ ಮಾತನಾಡಿ, ಗೋಕರ್ಣದ ಸ್ವರಾತ್ಮ ಗುರುಕುಲದಲ್ಲಿ ಎಳೆಯ ಕೊರಳು ಹಾಗೂ ಬೆರಳು ಶೃತಿಯಾಗುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಕಾರ್ಯಕ್ರಮ ಆಯೋಜಿಸಿದ ಸತ್ವಾಧಾರ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.


ಉಪನ್ಯಾಸಕ ಚಿದಾನಂದ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು.

ವಿಷ್ಣುಗುಪ್ತ ವಿವಿ ಸ್ವರಾತ್ಮ ಗುರುಕುಲದ ಮುಖ್ಯಸ್ಥ ಡಾ. ಹರೀಶ ಹೆಗಡೆ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ರಮೇಶ ಪ್ರಭು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಸತ್ವಾಧಾರ ಬಳಗದ ರವೀಂದ್ರ ಭಟ್ಟ ಸೂರಿ, ಜಯದೇವ ಬಳಗಂಡಿ, ಸ್ವಾತಿ ಭಾಗ್ವತ್ ಇತರರು ಇದ್ದರು. ಮಂಜುನಾಥ ಭಟ್ಟ ಸುವರ್ಣಗದ್ದೆ, ಪ್ರಶಾಂತ ಹೆಗಡೆ ಮೂಡಲಮನೆ, ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ನಿರ್ವಹಿಸಿದರು.

ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಸ್ವರಾತ್ಮ ಗುರುಕುಲದ ವಿದ್ಯಾರ್ಥಿಗಳು ಗಾನಯಾನ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಶ್ರೀಹರಿ ಕುಲಕರ್ಣಿ ವಿಜಯಪುರ, ಗಣೇಶ ವಾರದ, ಸಂಧ್ಯಾ ಹೆಗಡೆ ಕುಮಟಾ, ಗೀತಾ ಕುಲಕರ್ಣಿ ವಿಜಯಪುರ, ಸಾಕ್ಷಿ ಹಿರೇಮಠ ಗಾಯನಕ್ಕೆ ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂ ನಲ್ಲಿ ಸತೀಶ ಭಟ್ಟ ಹೆಗ್ಗಾರ, ರಿದಂ ಪ್ಯಾಡ್ ನಲ್ಲಿ ವಿ.ಟಿ.ಭಟ್ಟ ಕನಕನಹಳ್ಳಿ ಸಾಥ್ ನೀಡಿದರು.