ಹೊಸಕೋಟೆ: ಬಡವರಿಗೆ ನಿವೇಶನ ನೀಡಲು ಸರ್ಕಾರ ತನ್ನದೇ ಆದ ಕಾನೂನು ರೂಪಿಸಿದೆ. ಆದರೆ ಸ್ಥಳೀಯ ಗ್ರಾಪಂ ಸದಸ್ಯರ ಮೇಲೆ ಒತ್ತಡ ಹಾಕಿ ಕಾನೂನಿಗೆ ವಿರುದ್ಧವಾಗಿ ಯಾರೂ ನಿವೇಶನ ಪಡೆಯಲು ಸಾಧ್ಯವಿಲ್ಲ ಎಂದು ತಾಪಂ ಇಒ ಡಾ. ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಮುತ್ಸಂದ್ರ ಗ್ರಾಪಂ ವ್ಯಾಪ್ತಿಯ ನಾಗನಾಯಕನ ಕೋಟೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ನಾಗನಾಯಕನ ಕೋಟೆಯಲ್ಲಿ ಸರ್ವೆ ನಂಬರ್ 5ರಲ್ಲಿ 7ಎಕರೆ ಜಾಗ ಗುರುತಿಸಲಾಗಿದೆ. ನಿರ್ಗತಿಕರಿಗೆ ಮಾತ್ರ ಸರ್ಕಾರದ ನಿಯಮಾನುಸಾರ ಅಗತ್ಯ ದಾಖಲೆಗಳಿದ್ದರೆ ನಿವೇಶನ ದಕ್ಕುತ್ತದೆ. ಉಳ್ಳವರು ವಿನಾಕಾರಣ ಅರ್ಜಿ ಹಾಕಿ ಸದಸ್ಯರ ಮೇಲೆ ಒತ್ತಡ ಹಾಕಿ ನಿವೇಶನ ಪಡೆಯಲು ಯತ್ನಿಸಬೇಡಿ. ಹಾಗೆಯೆ ಗ್ರಾಪಂ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಬೇಕಾದರೆ ಗ್ರಾಮಸಭೆಗಳು ಮಹತ್ವದ ಪಾತ್ರ ವಹಿಸಲಿದ್ದು ವಾರ್ಡ್ ಸಭೆ ನಡೆಸಿ ಬಳಿಕ ಗ್ರಾಮ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ಮೇಲೆ ಅಗತ್ಯ ಮೂಲ ಸೌಕರ್ಯಗಳನ್ನು ಗ್ರಾಮಗಳಲ್ಲಿ ಕಲ್ಪಿಸಲಾಗುತ್ತದೆ ಎಂದರು.ಎರಡೂವರೆ ಸಾವಿರ ಮನೆ ವಾಪಸ್: ಕಳೆದ ಎರಡು ವರ್ಷಗಳಿಂದ ತಾಲೂಕಿಗೆ 5 ಸಾವಿರ ಮನೆಗಳು ಮಂಜೂರಾಗಿದ್ದು ಈ ಪೈಕಿ ಎರಡೂವರೆ ಸಾವಿರ ಮನೆಗಳು ವಾಪಸ್ ಹೋಗಿವೆ. ಉಳಿದ ಎರಡೂವರೆ ಸಾವಿರ ಮನೆಗಳ ಪೈಕಿ 300 ಮನೆ ನಿರ್ಮಾಣ ಪ್ರಾರಂಭಿವೇ ಮಾಡಿಲ್ಲ. ಉಳಿದ ಮನೆಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಅರ್ಧದಷ್ಟು ಕಾಮಗಾರಿ ಹಾಗೆ ಉಳಿದಿದೆ. ಅದರಿಂದ ಗ್ರಾಪಂ ಸದಸ್ಯರು ಅಂತಹವರನ್ನು ಮನೆ ಪೂರ್ಣಗೊಳಿಸಲು ಪ್ರೇರೇಪಣೆ ಮಾಡಬೇಕು ಎಂದು ತಿಳಿಸಿದರು.
ಇಂಗು ಗುಂಡಿ ನಿರ್ಮಿಸಿ ಸ್ವಚ್ಛತೆ ಕಾಪಾಡಿ:ಗ್ರಾಮಗಳಲ್ಲಿ ಮನೆ ಮುಂದೆ ಇಂಗು ಗುಂಡಿಗಳನ್ನು ನಿರ್ಮಿಸಿಕೊಂಡು ಮನೆಯ ಬಚ್ಚಲು ನೀರನ್ನು ಚರಂಡಿಗಳಿಗೆ ಹರಿಸಿ ಸ್ವಚ್ಛತೆ ಕಾಪಾಡಿಸಕೊಳ್ಳಬೇಕು. ಇಂಗು ಗುಂಡಿಗೆ ಸರ್ಕಾರ 11 ಸಾವಿರ ರು. ಸಹಾಯ ಧನ ನೀಡುತ್ತದೆ. ಉಳಿದಂತೆ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮ ಜವಾಬ್ದಾರಿ. ಮನೆ ಬಾಗಿಲಿಗೆ ಕಸ ಸಂಗ್ರಹಣೆಗೆ ಬರುವ ವಾಹನಗಳಿಗೆ ಕಸ ನೀಡಬೇಕು ಎಂದು ತಾಪಂ ಇಒ ನಾರಾಯಣಸ್ವಾಮಿ ಹೇಳಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಬ್ಯಾಟೆಗೌಡ, ಪಿಡಿಒ ಮೆಹಬೂಬ್ ಪಾಷಾ, ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಬೆಳ್ಳಿಕೆರೆ ಮಂಜುನಾಥ್, ನೋಡಲ್ ಅಧಿಕಾರಿ ಬಾಷಾ, ಎಸಿಡಿಪಿಒ ಸಂಧ್ಯಾ, ಗ್ರಾಪಂ ಸದಸ್ಯರಾದ ಅಂಜಿನಪ್ಪ, ಆಶಾರಾಣಿ, ವಿನೋದ್, ವೆಂಕಟೇಶ್, ಹಾರೋಹಳ್ಳಿ ಬಾಲಚಂದ್ರ, ಅನಿತಾ, ಹೆಮ್ಮಂಡಳ್ಳಿ ನಾಗವೇಣಿ ಕೋಟೂರು ಜಗದೀಶ್, ಸುಜಾತ ನಾರಾಯಣಸ್ವಾಮಿ, ಯಶೋಧ ಮುನಿರಾಜು, ನಂಜುಂಡರೆಡ್ಡಿ, ಪಿಡಿಒ ಮೆಹಬೂಬ್ ಪಾಷಾ, ಕಾರ್ಯದರ್ಶಿ ರೂಪ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಚಿನ್ನಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಫೋಟೋ : 19 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ನಾಗನಾಯಕನ ಕೋಟೆಯಲ್ಲಿ ಮುತ್ಸಂದ್ರ ಗ್ರಾಪಂ ಗ್ರಾಮ ಸಭೆಯನ್ನು ತಾಪಂ ಇಒ ಡಾ.ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷೆ ಗಾಯತ್ರಿ ಉದ್ಘಾಟಿಸಿದರು.