ಕನ್ನಡಪ್ರಭ ವಾರ್ತೆ ಚಿಂಚೋಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಕಳೆಯುತ್ತಿವೆ. ಒಂದು ಹೊಸದಾಗಿ ಕಟ್ಟಡ, ಶೌಚಾಲಯ ನಿರ್ಮಿಸಿಲ್ಲ. ಏಕೆಂದರೆ ಕಾಂಗ್ರೆಸ್ ಸರ್ಕಾರದಲ್ಲಿ ಹಣ ಇಲ್ಲದೇ ಖಜಾನೆ ಬರಿದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ. ಇಂತಹ ದಿವಾಳಿ ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತು ಹೋಗುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಲೇವಡಿ ಮಾಡಿದ್ದಾರೆ.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದ ಉತ್ತಮ ಭವಿಷ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಮತ್ತೆ ಪ್ರಧಾನಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ಬೀದರ್ ಎಂಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಕೇವಲ ಸಾಂಕೇತಿಕ ಅಭ್ಯರ್ಥಿಯಾಗಿರುತ್ತಾರೆ. ನಮಗೆಲ್ಲರಿಗೂ ಕಮಲದ ಚಿನ್ಹೆಯೇ ಅಭ್ಯರ್ಥಿಯಾಗಿರುತ್ತದೆ. ಕೇಂದ್ರ ಸರ್ಕಾರದ ಸಾಧನೆ ಮೇಲೆ ಮತಯಾಚಿಸಬೇಕೆಂದು ಕಾರ್ಯಕರ್ತರಿಗೆ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಎಲ್ಲ ಅಣೆಕಟ್ಟುಗಳು ಜಲಾಶಯಗಳು, ಹಳ್ಳಕೊಳ್ಳ ಭರ್ತಿಯಾಗಿ ತುಂಬಿಹರಿಯುತ್ತಿದ್ದವು. ಆದರೆ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ೨೦೧೩ರಿಂದ ೨೦೧೮ವರೆಗೆ ಉತ್ತಮ ಮಳೆಯಾಗದೇ ಬರಗಾಲ ಆಗಿತ್ತು. ಆದರೆ ಬಿ.ಎಸ್.ವೈ. ಕಾಲಗುಣದಿಂದ ರಾಜ್ಯದಲ್ಲಿ ಬರಗಾಲ ಹೋಗಿ ಪ್ರವಾಹ ಹೆಚ್ಚಾಗಿ ಹೋಗಿತ್ತು. ಇಗಿನ ಸರ್ಕಾರದಲ್ಲಿ ರೈತರಿಗೆ ಕೊಡಲು ಹಣ ಇಲ್ಲ. ಹೊಸ ಬೊರ್‌ವೆಲ್ ಕೊರೆಯಲು ಹಣ ಇಲ್ಲ. ರಾಜ್ಯದ ಬೊಕ್ಕಸ ಸಂಪೂರ್ಣವಾಗಿ ಬರಿದಾಗಿದೆ. ಕಷ್ಟಕ್ಕೂ ಹಣ ಇಲ್ಲ, ಸುಖಕ್ಕೂ ಹಣ ಇಲ್ಲ. ೬೦ ಸಾವಿರ ಕೋಟಿ ರು. ಎಲ್ಲಿಂದ ಬಂದಿದೆ. ೨ ಸಾವಿರ ರು. ಗ್ಯಾರಂಟಿ ಹಣ ಕೊಡಲು ಆಗುತ್ತಿಲ್ಲ. ವಿದ್ಯುತ್, ಮದ್ಯ, ಆಸ್ತಿ ನೋಂದಣಿಗಳಿಗೆ ಹೆಚ್ಚಿನ ಶುಲ್ಕ ಮಾಡಿರುವುದರಿಂದ ಹಣ ಬರುತ್ತಿದೆ ಎಂದು ಟೀಕಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ದೇಶದ ೧೪೦ ಕೋಟಿ ಜನರೇ ನನ್ನ ಕುಟುಂಬವೆಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಇವರು ನಮ್ಮ ಕುಟುಂಬವೇ ನಮ್ಮವರು ಎಂದು ಹೇಳುತ್ತಿದ್ದಾರೆ. ಬಿಜೆಪಿ ತಂಡಕ್ಕೆ ಪ್ರಧಾನಮಂತ್ರಿಗಳೇ ಕ್ಯಾಪ್ಟನ್ ಆಗಿರುತ್ತಾರೆ. ಆದರೆ ಕಾಂಗ್ರೆಸ ತಂಡಕ್ಕೆ ಯಾರೂ ಇನ್ನುವರೆಗೂ ಕ್ಯಾಪ್ಟನ್ ಆಗಿಲ್ಲ. ಬೀದರ್ ಲೋಕಸಭೆ ಚುನಾವಣೆಯಲ್ಲಿ ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಚಿಂಚೋಳಿ ಕ್ಷೇತ್ರದಿಂದ ೩೦ ಸಾವಿರ ಮತಗಳ ಲೀಡ್ ಕೊಡಬೇಕು. ಕಾಂಗ್ರೆಸ್‌ನಿಂದ ಡಿ.ಕೆ. ಸುರೇಶ ಸೋಲು ಖಚಿತ. ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ ಗೆಲುವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿರಿ ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖುಬಾ ಮಾತನಾಡಿ, ಕಳೆದ ಹತ್ತುವರ್ಷಗಳಿಂದ ಬೀದರ್ ಲೋಕಸಭಾ ಸದಸ್ಯನಾಗಿ ಅನೇಕ ಕ್ರೀಯಾಶೀಲನಾಗಿ ಕೆಲಸ ಮಾಡಿದ್ದೇನೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ₹೫೦ ಕೋಟಿ ಗಳಲ್ಲಿ ಕೋವಿಡ್‌ನಿಂದಾಗಿ ಕೇವಲ ₹೪೦ ಕೋಟಿಅನುದಾನ ಬಂದಿದೆ. ಆಳಂದ, ಚಿಂಚೋಳಿ ಮತಕ್ಷೇತ್ರಕ್ಕೆ ೮ ಕೋಟಿ ರು. ಅನುದಾನ ನೀಡಿದ್ದೇನೆ. ಬೀದರ ಮಹೆಬೂಬನಗರ ರಾಷ್ಟ್ರೀಯ ಹೆದ್ದಾರಿ, ಮಹಾಗಾಂವ-ಸುಲೇಪೇಟ ಹಾಗೂ ಐನಾಪೂರ ಏತ ನೀರಾವರಿ ಯೋಜನೆಗೆ ಅನುದಾನ ನೀಡಲಾಗಿದೆ. ಎಲ್ಲ ಸಾಧನೆಗಳನ್ನು ಜನರಿಗೆ ತೋರಿಸಿ ಮತ ಪಡೆಯಬೇಕು ಎಂದು ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು.ಸಭೆಯಲ್ಲಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ ಹುಮನಾಬಾದ, ಮಾಜಿಶಾಸಕ ಅಮರನಾಥ ಪಾಟೀಲ, ಜಗನ್ನಾಥ ಪಾಟೀಲ, ಸಂತೋಷ ಗಡಂತಿ, ತಾಲೂಕು ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೆಂಗಟಾ, ಶಶಿಕಲಾ ತೆಂಗಳಿ, ಈಶ್ವರಸಿಂಗ ಠಾಕೂರ, ಶರಣಪ್ಪ ತಳವಾರ ಇನ್ನಿತರಿದ್ದರು ಇದ್ದರು.