ನರಗುಂದ: ಮಹದಾಯಿ ಮತ್ತು ಕಳಸಾ -ಬಂಡೂರಿ ನಾಲಾ ಯೋಜನೆ ಜಾರಿಗೆ ಈ ಭಾಗದ ರೈತರು ಹಲವು ವರ್ಷಗಳಿಂದ ಹೋರಾಟ ಮಾಡಿದ್ದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಜಾರಿ ಮಾಡುತ್ತಿಲ್ಲ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದರು.
ಕೇಂದ್ರ ಸರ್ಕಾರ ಈ ಭಾಗದ ರೈತರಿಗೆ ಮೋಸ ಮಾಡಲು ಗೋವಾ ಮತ್ತು ಕರ್ನಾಟಕ ಪ್ರದೇಶವನ್ನು ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಗೋವಾದವರು ಹೇಳಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ, ಆದರೆ ಇದು ಸುಳ್ಳು ಸುದ್ದಿ, ಅವರು ಹೇಳಿದ್ದು ಗೋವಾಕ್ಕೆ ಸೇರಿದ ಪ್ರದೇಶಗಳನ್ನು ಹುಲಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವ ಪ್ರಹ್ಲಾದ ಜೋಶಿ ಅವರು ಸದ್ಯ ಈ ಯೋಜನೆ ಜಾರಿ ಮಾಡಿದರೆ ಅದರ ಕೀರ್ತಿ ಮಹದಾಯಿ ಹೋರಾಟಗಾರರಿಗೆ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಪ್ಪು ಸಂದೇಶ ರವಾನೆ ಮಾಡಿ ಈ ಯೋಜನೆ ಜಾರಿಗೆ ಅಡ್ಡಿಯಾಗಿದ್ದಾರೆ ಎಂದರು.ಈಗಾಗಲೇ ಮಹದಾಯಿ, ಕಳಸಾ, ಬಂಡೂರಿ, ನಾಲಾ, ಚೋರ್ಲಾ ಹಳ್ಳಗಳ ಪ್ರದೇಶಕ್ಕೆ ವನ್ಯಜೀವಿ ಮತ್ತು ಅರಣ್ಯ ಕೇಂದ್ರದ ಇಲಾಖೆಯವರು ಭೇಟಿ ನೀಡಿ ಈ ಪ್ರದೇಶ ಹುಲಿ ಓಡಾಟದ ಪ್ರದೇಶವಲ್ಲವೆಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದರೂ ಕೇಂದ್ರ ಸರ್ಕಾರ ಮತ್ತು ಸಚಿವ ಜೋಶಿ ಇದನ್ನು ಮುಚ್ಚಿಟ್ಟು ನಾಟಕವಾಡುತ್ತಿದ್ದಾರೆ ಎಂದರು.
ಮಲ್ಲಣ್ಣ ಅಲೇಕಾರ, ಗುರು ರಾಯನಗೌಡ್ರ, ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ಮಲ್ಲೇಶ ಅಣ್ಣಿಗೇರಿ, ಶಿವಪ್ಪ ಸಾತಣ್ಣವರ, ಶಂಕ್ರಪ್ಪ ಜಾಧವ, ಯಲ್ಲಪ್ಪ ಚಲವಣ್ಣವರ, ನಾಗರತ್ನಾ ಸವಳಬಾವಿ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಉಪಸ್ಥಿತರಿದ್ದರು.