ಕನ್ನಡಪ್ರಭ ವಾರ್ತೆ ಮಡಿಕೇರಿ
ಗೌಡ ಫುಟ್ಬಾಲ್ ಅಕಾಡೆಮಿಯಿಂದ ತಾಲೂಕಿನ ಮರಗೋಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಏಳನೇ ವರ್ಷದ ಗೌಡ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಮುಕ್ಕಾಟಿ ತಂಡ, ಬೊಳ್ಳೂರು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಬೊಳ್ಳೂರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.ಬೊಳ್ಳೂರು ಹಾಗೂ ಮುಕ್ಕಾಟಿ ತಂಡಗಳ ನಡುವೆ ರೋಚಕ ಫೈನಲ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಉಭಯ ತಂಡಗಳು 2-2 ಗೋಲುಗಳನ್ನು ದಾಖಲಿಸಿ ಸಮಬಲ ಸಾಧಿಸಿದವು. ನಂತರ ನಡೆದ ಟ್ರೈ ಬ್ರೇಕರ್‌ನಲ್ಲಿ ಮುಕ್ಕಾಟಿ ತಂಡ ಗೆಲುವು ಪಡೆದುಕೊಂಡಿತು.
ಬೊಳ್ಳೂರು ತಂಡದ ಪರ ಮೋನಿಶ್ ಹಾಗೂ ಗಗನ್ ತಲಾ 1 ಗೋಲು ಹಾಗೂ ಮುಕ್ಕಾಟಿ ತಂಡದ ಪರ ಮೋನಿಶ್ ಹಾಗೂ ಸೋನಾ ತಲಾ 1 ಗೋಲು ಬಾರಿಸಿದರು.ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಕ್ಕಾಟಿ ತಂಡ 2-1 ಗೋಲಿನ ಅಂತರದಿಂದ ಕೊಳಂಬೆ ತಂಡವನ್ನು ಸೋಲಿಸಿತು. ಮುಕ್ಕಾಟಿ ತಂಡದ ಪರ ತರುಣ್ ಹಾಗೂ ಮೋನಿಶ್ ತಲಾ 1 ಗೋಲ್ ಹೊಡೆದು ಜಯ ತಂದುಕೊಟ್ಟರು. ಕೊಳಂಬೆ ತಂಡದ ಪರ ಗಿರೀಶ್ 1 ಗೋಲ್ ದಾಖಲಿಸಿದರು.
ಎರಡನೇ ಸೆಮಿಫೈನಲ್ ಪಂದ್ಯ ಮರದಾಳು ಹಾಗೂ ಬೊಳ್ಳೂರು ತಂಡದ ನಡುವೆ ನಡೆದು ಉಭಯ ತಂಡಗಳು ಯಾವುದೇ ಗೋಲು ದಾಖಲಿಸಿದೆ ಸಮಬಲ ಸಾಧಿಸಿದವು. ನಂತರ ನಡೆದ ಟ್ರೈ ಬ್ರೇಕರ್‌ನಲ್ಲಿ ಬೊಳ್ಳೂರು ತಂಡ ಗೆದ್ದು ಫೈನಲ್ ಪ್ರವೇಶ ಪಡೆಯಿತು.ಮೂರನೇ ಹಾಗೂ ನಾಲ್ಕನೇ ಸ್ಥಾನವನ್ನು ಮರದಳು ಹಾಗೂ ಕೊಳಂಬೆ ತಂಡ ಪಡೆದುಕೊಂಡವು.
ಪಂದ್ಯದಲ್ಲಿ ಬೆಸ್ಟ್ ಪ್ಲೇಯರ್ ಆಗಿ ರೋಶನ್ ಬೊಳ್ಳೂರು, ಬೆಸ್ಟ್ ಗೋಲ್ ಕೀಪರ್ ಆಗಿ ಭಾವನ್ ಕೊಳಂಬೆ, ಬೆಸ್ಟ್ ಡಿಫೆಂಡರ್ ಆಗಿ ದಯಾ ಮುಕ್ಕಾಟಿ, ಅತಿ ಹೆಚ್ಚು ಗೋಲು- ಗಗನ್ ಬೋಲ್ತಾಜಿ, ಎಮರ್ಜಿಂಗ್ ಪ್ಲೇಯರ್ - ಗಗನ್ ಬೊಳ್ಳೂರು, ಉತ್ತಮ ತಂಡವಾಗಿ ಕಾಂಗೀರ ತಂಡ ಪ್ರಶಸ್ತಿ ಗಳಿಸಿತು.ಯುನಿಟಿ ಕಪ್ ಫುಟ್ಬಾಲ್ ಫಲಿತಾಂಶ: ಗೌಡ ಫುಟ್ಬಾಲ್ ಅಕಾಡೆಮಿಯಿಂದ ನಡೆದ ಮೂರನೇ ವರ್ಷದ ಯುನಿಟಿ ಕಪ್ ಫೈನಲ್ ಪಂದ್ಯದಲ್ಲಿ ಕಟ್ಟೆಮಾಡು ತಂಡ ಚಾಂಪಿಯನ್ ಪ್ರಶಸ್ತಿ ಗಳಿಸಿತು. ಅರೆಕಾಡು ತಂಡ ದ್ವಿತೀಯ ಸ್ಥಾನ ಪಡೆಯಿತು.
ಕಟ್ಟೆಮಾಡು ತಂಡ ಪರ ಜೈನೀರ ರೋಶನ್ 1 ಗೋಲು ಬಾರಿಸಿದರು. ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಕಟ್ಟೆಮಾಡು ತಂಡದ ರಾಜ, ಬೆಸ್ಟ್ ಡಿಫೆಂಡರ್ ಕಟ್ಟೆಮಾಡು ತಂಡದ ವಿನು ಹಾಗೂ ಬೆಸ್ಟ್ ಗೋಲ್ ಕೀಪರ್ ಕಟ್ಟೆಮಾಡು ತಂಡದ ಸುಜಯ್ ಪಡೆದುಕೊಂಡರು.