ಚನ್ನಮ್ಮ ಅಗಲಿಕೆ ವೇಳೆ ಜನರ ಪ್ರೀತಿಗೆ ಗೌಡರ ಕೃತಜ್ಞತೆ

KannadaprabhaNewsNetwork |  
Published : Jul 25, 2026, 01:45 AM IST
ದೇವೇಗೌಡ | Kannada Prabha

ಸಾರಾಂಶ

ಇತ್ತೀಚೆಗೆ ಅಗಲಿದ ತಮ್ಮ ಧರ್ಮಪತ್ನಿ ಚೆನ್ನಮ್ಮ ಅವರಿಗೆ ರಾಜ್ಯದ ಜನತೆ ತೋರಿದ ಪ್ರೀತಿ, ಗೌರವ, ಅಭಿಮಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಇತ್ತೀಚೆಗೆ ಅಗಲಿದ ತಮ್ಮ ಧರ್ಮಪತ್ನಿ ಚೆನ್ನಮ್ಮ ಅವರಿಗೆ ರಾಜ್ಯದ ಜನತೆ ತೋರಿದ ಪ್ರೀತಿ, ಗೌರವ, ಅಭಿಮಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ದೇವೇಗೌಡರು, 72 ವರ್ಷಗಳ ಸುದೀರ್ಘ ಕಾಲ ನನ್ನೊಂದಿಗೆ ಹೆಜ್ಜೆಗೆ ಹೆಜ್ಜೆ ಇರಿಸಿ ನಡೆದಿದ್ದ ನನ್ನ ಸಹಧರ್ಮಿಣಿ ಚೆನ್ನಮ್ಮ ಅವರು 2026 ಜು.18ರಂದು ಶಿವೈಕ್ಯರಾದರು. ಮನೆಯ ನಂದಾದೀಪ ನಂದಿಹೋದ ಕಷ್ಟಕರ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿ ಸಾಂತ್ವನದ ಚೈತನ್ಯಧಾರೆ ಎರೆದ ಸಮಸ್ತರಿಗೂ ಕೈ ಜೋಡಿಸಿ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ ಎಂದಿದ್ದಾರೆ.

ನಾವಿಬ್ಬರು ಸುಖ-ದುಃಖದಲ್ಲಿ ಸಮಭಾಗಿಗಳಾಗಿ ಸಪ್ತದಶಕಗಳ ಕಾಲ ಜೀವನ್ಮುಖಿಗಳಾಗಿ ತುಂಬು ಜೀವನ ನಡೆಸಿದ್ದೇವೆ. ಶಾಸಕನಾಗಿ, ಪ್ರತಿಪಕ್ಷ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೊನೆಗೆ ಪ್ರಧಾನಮಂತ್ರಿಯಾಗಿ ರಾಷ್ಟ್ರಸೇವೆ ಮಾಡುವ ಮಹಾಭಾಗ್ಯ ಸಿಕ್ಕಿತು. ಕೀರ್ತಿ ಪ್ರಖ್ಯಾತಿ ಎಲ್ಲವೂ ನನಗಷ್ಟೇ ಸೇರಿತು. ಅದರ ಹಿಂದಿನ ಚೈತನ್ಯಶಕ್ತಿ ಚೆನ್ನಮ್ಮನವರೇ ಆಗಿದ್ದರು. ಗಂಧದ ಕೊರಡು ತನ್ನನ್ನು ತಾನು ತೇಯ್ದುಕೊಂಡು ಪರಿಮಳ ಹೊರಸೂಸುವಂತೆ ಚೆನ್ನಮ್ಮನವರ ಎಣೆಯಿಲ್ಲದ ಮಮತೆ ಮತ್ತು ತ್ಯಾಗಶೀಲತೆ ನನ್ನ ಬಾಳಿಗೆ ಪರಿಪೂರ್ಣತೆ ತುಂಬಿತು ಎಂದು ಹೇಳಿದ್ದಾರೆ.

ರಾಜಕೀಯ ಹಿನ್ನೆಲೆಯೇ ಇಲ್ಲದ ನಮ್ಮ ಕುಟುಂಬದ ಸೊಸೆಯಾಗಿ ಬಂದ ಅವರು, ದೈವಭಕ್ತಿ, ಸಾತ್ವಿಕತೆ ಮತ್ತು ಸಾಂಪ್ರದಾಯಿಕ ನಡವಳಿಕೆ ಮೂಲಕ ನಮ್ಮ ಮನೆಯನ್ನು ನಂದಗೋಕುಲ ಮಾಡಿದರು. ನಿತ್ಯ ದಾಸೋಹಿಯಾಗಿ ಮನೆಯ ಅನ್ನಪೂರ್ಣೆಯಾದರು. ಮಾನವೀಯ ಮೌಲ್ಯಗಳ ಅನುಸರಣೆ ಹಾಗೂ ಶುದ್ಧ ಅಂತಃಕರಣದ ಮಾತೃಪ್ರೇಮದ ಮೂಲಕ ಎಲ್ಲರ ಪಾಲಿನ ಅಮ್ಮನಾದರು ಎಂದು ಸ್ಮರಿಸಿದ್ದಾರೆ.

ನನ್ನ ಮನೆಯನ್ನು ಬೆಳಗಿ ಬೆಳೆಸಿದ ಚೆನ್ನಮ್ಮ ಅವರು ಶಿವನ ಪಾದ ಸೇರಿದ ಹೊತ್ತಿನಲ್ಲಿ ರಾಜ್ಯದ ಜನ ತೋರಿದ ಅಂತಃಕರಣಪೂರ್ವಕ ಮಮತೆ, ಗೌರವಕ್ಕೆ ಪರಲೋಕದಲ್ಲಿರುವ ಅವರು, ಇಹದಲ್ಲಿರುವ ನಾನೂ ಧನ್ಯರಾಗಿದ್ದೇವೆ. ಅವರು ಕೊನೇ ಶ್ವಾಸ ಬಿಟ್ಟಾಗಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಪಾದದ ಬುಡದಲ್ಲಿ ಚಿರನಿದ್ರೆಗೆ ಜಾರುವ ಕ್ಷಣದವರೆಗೂ ಅವರ ಆತ್ಮಕ್ಕಾಗಿ ಮರುಗಿದ ಎಲ್ಲರಿಗೂ ಭಾವಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ವಿವಿಧ ಮಠಗಳ ಮಠಾಧೀಶರು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು, ಮಾಧ್ಯಮ ಬಂಧುಗಳು, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ರಾಜ್ಯದ ಸರ್ವ ಭಾಗಗಳಿಂದ ಹರಿದುಬಂದ ಜನಸಾಗರ ನನ್ನ ಅರ್ಧಾಂಗಿಯ ಆತ್ಮಕ್ಕೆ ಚಿರಶಾಂತಿ ಕೋರಿತು. ವಿಶೇಷವಾಗಿ ನಾನು ಜನ್ಮವೆತ್ತಿದ ಹಾಸನ ಜಿಲ್ಲೆಯ ಮಹಾಜನರು ತಮ್ಮ ಅಕ್ಕರೆಯ ಅಮ್ಮ ಚೆನ್ನಮ್ಮನವರ ಬಗ್ಗೆ ತೋರಿದ ಅಭಿಮಾನ, ವಾತ್ಸಲ್ಯಕ್ಕೆ ನಾನು ಮೂಕನಾಗಿದ್ದೇನೆ. ಎಲ್ಲರಿಗೂ ನಾನು ವಿನೀತನಾಗಿ ನಮಿಸುತ್ತೇನೆ ಎಂದು ದೇವೇಗೌಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ
ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ