ಕನ್ನಡಪ್ರಭ ವಾರ್ತೆ ಮಡಿಕೇರಿ
ಒಕ್ಕೂಟದ ಸಂಸ್ಥಾಪಕ ಸಂಚಾಲಕಿಯಾಗಿ ರೇವತಿ ರಮೇಶ್, ಅಧ್ಯಕ್ಷರಾಗಿ ಮೂಟೇರ ಪುಷ್ಪಾವತಿ ರಮೇಶ್, ಉಪಾಧ್ಯಕ್ಷರುಗಳಾಗಿ ಸುಳ್ಯ ತಾಲೂಕು ಮಹಿಳಾ ಅಧ್ಯಕ್ಷರಾದ ವಿನುತ ಪೌತಿಕಲ್ಲು, ಸೋಮವಾರಪೇಟೆಯ ಅಶ್ವಿನಿ ಕೃಷ್ಣಕಾಂತ್, ಗೌರವ ಕಾರ್ಯದರ್ಶಿ ಮರಗೋಡಿನ ಮಂದ್ರೀರ ಸುಗೀತಾ ಜಯಪ್ರಕಾಶ್, ಕೋಶಾಧಿಕಾರಿ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸಹ ಕಾರ್ಯದರ್ಶಿಗಳಾಗಿ ಕುಟ್ಟನ ಶ್ವೇತ ಪ್ರಶಾಂತ್ ಹಾಗೂ ದುಗ್ಗಳ ಕಾವ್ಯ ಕಪಿಲ್ ಆಯ್ಕೆಯಾಗಿದ್ದಾರೆ.
ನೂತನವಾಗಿ ಒಕ್ಕೂಟವನ್ನು ರಚಿಸಿರುವ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥಾಪಕ ಸಂಚಾಲಕಿ ರೇವತಿ ರಮೇಶ್, ಗೌಡರೆಂದರೆ ಒಕ್ಕಲಿಗರು, ಒಕ್ಕಲಿಗರೆಂದರೆ ಗೌಡರು ಎಂಬ ಮಾತಿನಂತೆ ಕೊಡಗು ಜಿಲ್ಲೆಯ ಅರೆಭಾಷಿಕ, ಒಕ್ಕಲಿಗ ಮಹಿಳೆಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರನ್ನು ಒಗ್ಗೂಡಿಸಲಾಗಿದೆ. ಕೊಡಗು ಅರೆಭಾಷೆ, ಒಕ್ಕಲಿಗ ಹಾಗೂ ದಕ್ಷಿಣ ಕನ್ನಡ ಗೌಡ ಮಹಿಳೆಯರೆಲ್ಲಾ ಒಂದೆಡೆ ಸೇರಿ ಸಮಾಲೋಚನೆ ನಡೆಸಿ ನೂತನ ಮಹಿಳಾ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದರು.ಗೌಡ ಜನಾಂಗದ ಸಂಸ್ಕೃತಿ ಮತ್ತು ಸಂಪ್ರಾದಾಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಬಾರೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಗೌಡ ಸಂಸ್ಕೃತಿ, ಸಂಪ್ರದಾಯಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಸ್ಪರ ಆಯೋಜಿಸಿ ವಿನಿಮಯ ಮಾಡಿಕೊಳ್ಳಲಾಗುವುದು. ಗೌಡ ಸಮಾಜ ಮತ್ತು ಸಂಘಗಳ ಸಹಕಾರದಿಂದ ವಿವಿಧ ಜಿಲ್ಲೆಗಳಲ್ಲಿ ಗೌಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗೌಡ ಸಮುದಾಯದ ಪ್ರತಿಭಾನ್ವಿತ ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು. ಗೌಡ ಸಮುದಾಯದ ವಿವಿಧ ಜನಪದ ಕ್ರೀಡೆ ಮತ್ತು ಇತರೆ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಎಲ್ಲಾ ಗೌಡ ಸಮುದಾಯದ ಮಹಿಳೆಯರನ್ನು ಒಗ್ಗೂಡಿಸಲಾಗುವುದು ಎಂದು ವಿವರಿಸಿದರು.
ಉಪಾಧ್ಯಕ್ಷರಾದ ವಿನುತ ಪೌತಿಕಲ್ಲು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗೌಡ ಮಹಿಳಾ ಒಕ್ಕೂಟಗಳಿವೆ. ಇದೀಗ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಮಹಿಳೆಯರು ಒಗ್ಗೂಡಿ ಒಕ್ಕೂಟ ರಚನೆ ಮಾಡಿದ್ದು, ಗೌಡ ಜನಾಂಗದ ಆಚಾರ, ವಿಚಾರಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಅಶ್ವಿನಿ ಕೃಷ್ಣಕಾಂತ್, ಗೌರವ ಕಾರ್ಯದರ್ಶಿ ಮಂದ್ರೀರ ಸುಗೀತಾ ಜಯಪ್ರಕಾಶ್, ಕೋಶಾಧಿಕಾರಿ ಚೊಕ್ಕಾಡಿ ಪ್ರೇಮಾ ರಾಘವಯ್ಯ ಅವರು ಸುದ್ದಿಗೋಷ್ಠಿಯಲ್ಲಿದ್ದರು.