ಮಲ್ಪೆ ಘಟನೆ ದುರಾದೃಷ್ಟಕರ: ಶಾಸಕ ಯಶ್ಪಾಲ್ ಸುವರ್ಣ

KannadaprabhaNewsNetwork | Published : Mar 21, 2025 12:36 AM

ಸಾರಾಂಶ

ಮಲ್ಪೆ ಬಂದರಿನಲ್ಲಿ ನಡೆದ ಘಟನೆ ತೀರ ದುರದೃಷ್ಟಕರವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಮೀನುಗಾರಿಕೆ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಲ್ಪೆ ಬಂದರಿನಲ್ಲಿ ನಡೆದ ಘಟನೆ ತೀರ ದುರದೃಷ್ಟಕರವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಮೀನುಗಾರಿಕೆ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದ ಅತೀ ದೊಡ್ಡ ಸರ್ವಋತು ಮೀನುಗಾರಿಕೆ ಮಲ್ಪೆ ಬಂದರಿನ ನಿರ್ವಹಣೆಯ ಬಗ್ಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯ ಇಂತಹ ಘಟನೆಗೆ ಅವಕಾಶ ನೀಡಿದೆ. ಬಂದರಿನಲ್ಲಿ ನಿರಂತರವಾಗಿ ಕಳ್ಳತನ ಘಟನೆಗಳು ನಡೆಯುತ್ತಿದ್ದರೂ ಸೂಕ್ತ ಸಿಸಿಟಿವಿ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಿಸಿಲ್ಲ. ಈ ಬಗ್ಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳೊಂದಿಗೆ 3 ಬಾರಿ ಸಭೆ ನಡೆಸಿ ಸೂಚನೆ ನೀಡಿದ್ದು, ಬಂದರು ನಿರ್ವಹಣೆಯ ಗುತ್ತಿಗೆ ಅವಧಿ ಮುಗಿದು ಒಂದು ವರ್ಷ ಮೀರಿದ್ದರೂ ಟೆಂಡರ್ ನಿಯಮಗಳನ್ನು ಪಾಲಿಸದೆ ನಿರ್ವಹಣೆಯಲ್ಲಿ ಲೋಪ ಎಸಗಿದ ಬಗ್ಗೆ ದೂರುಗಳಿದ್ದರೂ ಅದೇ ವ್ಯಕ್ತಿಗೆ ನಿಯಮ ಬಾಹಿರವಾಗಿ ಟೆಂಡರ್ ಮುಂದುವರಿಸಿದ್ದಾರೆ. ಈ ಗಂಭೀರ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ

ಈ ಹಿಂದೆಯೂ ಸಣ್ಣಪುಟ್ಟ ಘಟನೆಗಳು ನಡೆದಾಗ ಮಲ್ಪೆ ಮೀನುಗಾರ ಸಂಘವು ಸೌಹಾರ್ದವಾಗಿ ಪರಿಹಾರ ಕಂಡುಕೊಂಡಿದೆ. ಉಡುಪಿ ಮಾತ್ರವಲ್ಲದೆ ಹೊರ ರಾಜ್ಯ, ಹೊರ ಜಿಲ್ಲೆಯ ಸಾವಿರಾರು ಮಂದಿ ಬಂದರಿನಲ್ಲಿ ದುಡಿಯುತ್ತಿದ್ದು, ಎಂದಿಗೂ ಮೇಲು ಕೀಳೆಂಬ ತಾರತಮ್ಯ ನಡೆದಿಲ್ಲ.

ಇತ್ತೀಚಿನ ದಿನಗಳಲ್ಲಿ ತೀವ್ರ ಮತ್ಸ್ಯಕ್ಷಾಮದಿಂದ ಮೀನುಗಾರರು ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಂತಹ ಆಕಸ್ಮಿಕ ಘಟನೆ ನಡೆದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ, ಮಲ್ಪೆ ಮೀನುಗಾರ ಸಂಘದ ಜೊತೆಯಾಗಿ ಸೂಕ್ತ ಕ್ರಮವಹಿಸುವುದಾಗಿ ಪ್ರಕಟಣೆಯಲ್ಲಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

Share this article