ನಾನಾ ಗ್ರಾಪಂಗಳಿಗೆ ಜಿಪಂ ಸಿಇಒ ಭೇಟಿ

KannadaprabhaNewsNetwork | Published : Jul 27, 2024 12:45 AM

ಸಾರಾಂಶ

ಕೊಲ್ಹಾರ ತಾಲೂಕಿನ ತೆಲಗಿ, ರೋಣಿಹಾಳ ಹಾಗೂ ಮುಳವಾಡ ಗ್ರಾಪಂಗೆ ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ವಿವಿಧೆಡೆ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ತಾಲೂಕಿನ ತೆಲಗಿ, ರೋಣಿಹಾಳ ಹಾಗೂ ಮುಳವಾಡ ಗ್ರಾಪಂಗೆ ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ವಿವಿಧೆಡೆ ಪರಿಶೀಲನೆ ನಡೆಸಿದರು.

ತೆಲಗಿ ಗ್ರಾಮದ 4ನೇ ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 5ಕ್ಕೆ ಭೇಟಿ ನೀಡಿದ ಅವರು, ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರು ಪೂರಕ ಪೌಷ್ಟಿಕ ಆಹಾರದ ಸಮರ್ಪಕ ವಿತರಣೆ ಮಕ್ಕಳ ಆರೋಗ್ಯ ತಪಾಸಣೆ, ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಆಟವಾಡಲು ಆಟದ ಮೈದಾನವನ್ನು ಅಭಿವೃದ್ಧಿಪಡಿಸಲು ಸೂಚನೆ ನೀಡಿದರು. ಹೊಸದಾಗಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ ಭೇಟಿ ನೀಡಿ, ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಓದುಗರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು ಎಂದರು.

ಮಕ್ಕಳು ಹಾಗೂ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತ ಪುಸ್ತಕಗಳನ್ನು ಕಲ್ಪಿಸಬೇಕು ಎಂದ ಅವರು, ಆಗಸ್ಟ್ ೧೫ ರಂದು ಕಡ್ಡಾಯವಾಗಿ ಉದ್ಘಾಟನೆ ಮಾಡಲು ಸೂಚಿಸಿದರು. ಕೂಸಿನ ಮನೆ ಕೇಂದ್ರದ ಸಿಬ್ಬಂದಿ, ಕಾರ್ಮಿಕರು ಬಿಡುವ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಕೇಂದ್ರವನ್ನು ಸೇವಾ ಮನೋಭಾವ, ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಜವಾಬ್ದಾರಿಯಿಂದ ನಿರ್ವಹಿಸಿ ಯೋಜನೆ ಯಶಸ್ವಿಯಾಗಿಸಬೇಕು ಎಂದು ತಿಳಿಸಿದರು.ರೋಣಿಹಾಳ ಗ್ರಾಪಂ ವ್ಯಾಪ್ತಿಯ ಕುಪಕಡ್ಡಿ ಗ್ರಾಮದ ಆರ್‌ಎಂಎಸ್‌ಎ ಪ್ರೌಢಶಾಲೆಗೆ ಭೇಟಿ ನೀಡಿ ಪ್ರಗತಿ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಅತ್ಯಂತ ಕಾಳಜಿ ಪೂರ್ವಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಶಾಲೆಯ ಮೂರು ವರ್ಗಕೋಣೆಗಳಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಕ್ಲಾಸ್‌ ಬೋರ್ಡ್‌ಗಳನ್ನು ವೀಕ್ಷಣೆಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಜತೆಗೆ ಅವರ ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸಿ ಸಲಹೆಗಳನ್ನು ಕೂಡ ನೀಡಿದರು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದುಂಡಪ್ಪ ಸಿದ್ದಪ್ಪ ಕುರದಡ್ಡಿ ವಿದ್ಯಾರ್ಥಿ ಜತೆಗೆ ಮಾತನಾಡಿ, ಸಮಸ್ಯೆಗಳನ್ನು ಆಲಿಸಿದರು. ನಂತರ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಆಟದ ಮೈದಾನ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ಎಲ್ಲ ಕೆಲಸಗಳನ್ನು ಮುಗಿಸಲು ಪಿಡಿಒ ಸುಕನ್ಯಾ ಲಂಬು ಅವರಿಗೆ ಸೂಚಿಸಿದರು.ಮುಳವಾಡ ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಕೊಠಡಿಗಳನ್ನು ಪರಿಶೀಲಿಸಿದರು. ನರೇಗಾ ಯೋಜನೆ ಅಡಿಯಲ್ಲಿ ಆಟದ ಮೈದಾನ, ಮಳೆ ನೀರಿನ ಕೊಯ್ಲು, ಕಿಚನ್‌ ಗಾರ್ಡನ್‌ ನಿರ್ಮಾಣ ಮಾಡಲು ಪಿಡಿಒ ರಾಘವೇಂದ್ರ ಪಂಚಾಳರಿಗೆ ಸೂಚನೆ ನೀಡಿದರು.ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮುದ್ದೀನ, ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಬ.ಬಾಗೇವಾಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಬ.ಬಾಗೇವಾಡಿ ಶಿಶು ಅಬಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪುರ, ಬ.ಬಾಗೇವಾಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಬಿ.ಗೊಂಗಡಿ, ವಿಲಾಸ ರಾಠೋಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬಸವನ ಬಾಗೇವಾಡಿ, ಎನ್.ಬಿ.ನಾಯಕ ಶಾಖಾಧಿಕಾರಿಗಳು ಕೊಲ್ಹಾರ, ಆನಂದ ಕೊಟ್ಯಾಳ ಸಹಾಯಕ ನಿರ್ದೇಶಕರು (ಪಂ.ರಾ) ತಾಪಂ ಕೊಲ್ಹಾರ, ದಸ್ತಗೀರಸಾಬ್ ಬಿಳೇಕುದರೆ, ಸುಕನ್ಯಾ ಲಂಬು, ರಾಘವೇಂದ್ರ ಪಂಚಾಳ, ಅರವಿಂದ ಕೊಪ್ಪದ ಇತರರು ಹಾಜರಿದ್ದರು.

Share this article