ಮರಳು ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಕಡ್ಡಾಯ : ಡಿಸಿ ಡಾ. ಸುಶೀಲಾ

KannadaprabhaNewsNetwork |  
Published : Jul 24, 2024, 12:25 AM IST
ಡಾ. ಸುಶೀಲಾ, ಜಿಲ್ಲಾಧಿಕಾರಿ, ಯಾದಗಿರಿ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣೆ ನಡೆಸುವ 44 ವಾಹನಗಳ ಮಾಲಿಕರ ವಿರುದ್ಧ 20 ಎಫ್.ಐ.ಆರ್ ದಾಖಲಿಸಿ ಒಟ್ಟು ₹202000 ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣೆ ನಡೆಸುವ 44 ವಾಹನಗಳ ಮಾಲಿಕರ ವಿರುದ್ಧ 20 ಎಫ್.ಐ.ಆರ್ ದಾಖಲಿಸಿ ಒಟ್ಟು ₹202000 ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ತರಹದ ಖನಿಜ ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಒಂದು ವೇಳೆ ಜಿಪಿಎಸ್ ಇಲ್ಲದಿರುವುದು ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಪರವಾನಗಿ ರದ್ದು ಮಾಡಲಾಗುತ್ತದೆ. ಜಿಪಿಎಸ್ ಅಳವಡಿಕೆ ಇಲ್ಲದ ಸುಮಾರು 62 ವಾಹನಗಳಿಗೆ ದಂಡ ವಿಧಿಸಿ ₹6 ಲಕ್ಷ 20 ರು. ವಸೂಲಿ ಮಾಡಲಾಗಿದೆ ಎಂದರು.ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಕಂಡುಬಂದರೆ ಕಾನೂನಿನ ಚೌಕಟ್ಟಿನೊಳಗೆ ತಕ್ಷಣ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಸಮಪರ್ಕವಾಗಿ ನಿರ್ವಹಣೆ ಮಾಡಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಆರ್‌ಟಿಓ, ಪರಿಸರ ನಿಯಂತ್ರಣ ಮಂಡಳಿ ಹೀಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಸಂಘಟಿತವಾಗಿ ಗಸ್ತು ಮಾಡುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ಸಾಗಾಟದ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.ಅಕ್ರಮ ಸಾಗಾಟದಲ್ಲಿ ಭಾಗಿಯಾಗುವ ವಾಹನಗಳನ್ನು ಆರ್‌ಟಿಓ ಮತ್ತು ಸಂಬಂಧಿಸಿದ ಅಧಿಕಾರಿಗಳು ಸೀಜ್ ಮಾಡಬೇಕು. ರಾಯಲ್ಟಿಗಿಂತ ಹೆಚ್ಚಿನ ಟ್ರಿಪ್ ಸಾಗಾಣಿಕೆಯಾಗದಂತೆ ನಿಗಾ ವಹಿಸಬೇಕು. ಜಿಪಿಎಸ್ ಅಳವಡಿಸಿಕೊಂಡಿರುವ ಲಾರಿಗಳಿಗೆ ಮಾತ್ರ ಮರಳು ಸಾಗಣೆಗೆ ಪರ್ಮೀಟ್ ಕೊಟ್ಟು, ಅಕ್ರಮವಾಗಿ ಸಾಗಣೆ ಮಾಡಿ ನಿಯಮ ಉಲ್ಲಂಘಿಸುವ ಲಾರಿಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಪರವಾನಿಗೆ, ರಾಯಲ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಪಾಸಣೆ ಮಾಡಬೇಕು. ಅತಿಭಾರದೊಂದಿಗೆ ಸಾಗುವ ವಾಹನಗಳಿಗೆ ದಂಡ ಹಾಕುವುದಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇನ್ನು ತಾಲೂಕು ಹಂತದಲ್ಲಿಯೂ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆ ನಡೆಸಬೇಕು. ಸಹಾಯಕ ಆಯುಕ್ತರ ಸಮಿತಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ನಿಗಾ ವಹಿಸಬೇಕು ಎಂದರು.ಈ ವೇಳೆ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಜಿಲ್ಲಾ ವರಿಷ್ಠಾಧಿಕಾರಿ ಜಿ. ಸಂಗೀತಾ, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪೂರ್ಣಿಮಾ ಸಿ., ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದಕುಮಾರ ಇತರರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''