- ನರಸಿಂಹರಾಜಪುರ ಸೀನಿಯರ್ ಛೇಂಬರ್ ನ 2024-25 ನೇ ಸಾಲಿನ ಘೋಷಣೆ ಸ್ವಚ್ಛ ಗಂಧ: ಪುಷ್ಪ ಎಸ್ ಶೆಟ್ಟಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ನ ಈ ವರ್ಷದ ಮುಖ್ಯ ಘೋಷಣೆ ಸ್ವಚ್ಛ ಗಂಧ ಕಾರ್ಯಕ್ರಮ ಎಂದು ಸೀನಿಯರ್ ಛೇಂಬರ್ ನ ರಾಷ್ಟ್ರೀಯ ಉಪಾಧ್ಯಕ್ಷೆ ಪುಷ್ಪ ಎಸ್ ಶೆಟ್ಟಿ ತಿಳಿಸಿದರು.
ಶನಿವಾರ ರಾತ್ರಿ ಸಿಂಸೆಯ ಕನ್ಯಾಕುಮಾರಿ ಕಂಫಟ್ಸ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನರಸಿಂಹರಾಜಪುರ ಸೀನಿಯರ್ ಚೇಂಬರ್ ನ 2024-25 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಸ್ವಚ್ಛ ಗಂಧ ಕಾರ್ಯಕ್ರಮದಡಿ ನಮ್ಮ ಊರುಗಳ ಕೆರೆ, ಭಾವಿ ಸ್ವಚ್ಛಗೊಳಿಸುವುದು. ನೀರಿನ ಮೂಲವನ್ನು ಸಹ ಶುದ್ದೀಕರಿಸುವುದು ಸೇರಿದೆ. ಇದರಿಂದ ಜನರಿಗೆ ಶುದ್ದ ನೀರು ಕೊಡಲು ಸಾಧ್ಯವಾಗುತ್ತದೆ. ಕಡಿಮ ಖರ್ಚಿನಲ್ಲಿ ಜನರಿಗೆ ಉತ್ತಮ ಸೇವೆ ನೀಡುವ ಕಾರ್ಯ ಕ್ರಮ ಹಾಕಿಕೊಳ್ಳಬೇಕು. ನಮಗೆ ವಯಸ್ಸಾಯಿತು ಎಂದು ಮನೆಯಲ್ಲಿ ಕೂರಬಾರದು. ಸದಾ ಚಟುವಟಿಕೆ ಯಿಂದ ಇದ್ದರೆ ಆರೋಗ್ಯ, ಆಯುಷ್ಯ ವೃದ್ಧಿಸಲಿದೆ. ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಪಯೋಗವಾಗುವ ರೀತಿಯಲ್ಲಿ ನಾಯಕತ್ವ ಗುಣದ ಬಗ್ಗೆ ತರಬೇತಿ, ಮಾನವೀಯ ಗುಣ ಬೆಳೆಸಲು ಸೂಕ್ತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಬಹುದು. ಸಾರ್ವಜನಿಕರಿಗೆ ಮೆಡಿಕಲ್ ಕ್ಯಾಂಪ್ ಸಹ ನಡೆಸಬಹುದು ಎಂದರು.ಮುಖ್ಯ ಭಾಷಣಕಾರರಾಗಿದ್ದ ಶೃಂಗೇರಿ ತಾಲೂಕಿನ ತೊರೆ ಹಡ್ಲು ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಗುರು ಮೂರ್ತಿ ಸಂಪಗೋಡು ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಸಹಕಾರ, ಸಹಾಯ, ಸೇವೆಯ ಗುಣ ಬೆಳೆಸಿಕೊಳ್ಳಬೇಕು. ಒಬ್ಬರಿಗೊಬ್ಬರೂ ಸಹಾಯ ಹಸ್ತ ಚಾಚುತ್ತಾ, ಕಷ್ಟ ಸುಖಗಳಲ್ಲಿ ಭಾಗಿಯಾದರೆ ಸಹಕಾರವಾಗುತ್ತದೆ. ಕಷ್ಟದಲ್ಲಿರುವರಿಗೆ ಸಹಾಯ ಮಾಡಿದರೆ ಮುಂದೆ ನೀವು ಕಷ್ಟದಲ್ಲಿದ್ದಾಗ ಬೇರೆಯವರೂ ಸಹಾಯ ಮಾಡುತ್ತಾರೆ. ಅದೇ ರೀತಿ ನಮ್ಮ ದುಡಿಮೆ ಹಣದಲ್ಲಿ ಸ್ವಲ್ಫ ಭಾಗ ದಾನಕ್ಕೆ ಇಡಬೇಕು. ಪ್ರತಿಫಲಾಫೇಕ್ಷೆ ಇಲ್ಲದೆ ಮಾಡುವ ಕಾರ್ಯ ಸೇವೆಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸೀನಿಯರ್ ಛೇಂಬರ್ ನ ರಾಷ್ಟ್ರೀಯ ನಿರ್ದೇಶಕ ಕೆ.ಪಿ.ಎಸ್ ಸ್ವಾಮಿ ಮಾತನಾಡಿ, ನರಸಿಂಹರಾಜಪುರ ಸೀನಿಯರ್ ಚೇಂಬರ್ ಗೆ ಹೊಸದಾಗಿ 7 ಸದಸ್ಯರ ಸೇರ್ಪಡೆ ಯಾಗಿದೆ. ಸೀನಿಯರ್ ಛೇಂಬರ್ ನ ಸದಸ್ಯರಿಗೆ ಹಿಂದಿನ ಅನುಭವ ಇರುವುದರಿಂದ ಸೇವೆ ಮಾಡಲು ಕಷ್ಟವಾಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.ಸೀನಿಯರ್ ಛೇಂಬರ್ ನೂತನ ಅಧ್ಯಕ್ಷ ಕೆ.ಆರ್ ನಾಗರಾಜ ಪುರಾಣಿಕ್ ಹಾಗೂ ನೂತನ ಕಾರ್ಯದರ್ಶಿ ಯಾಗಿ ಪಿ.ಎಸ್.ವಿದ್ಯಾನಂದಕುಮಾರ್ ಅಧಿಕಾರ ಸ್ವೀಕಾರ ಮಾಡಿದರು. ಸಭೆ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ನ ಅಧ್ಯಕ್ಷ ಎಚ್.ಬಿ.ರಘುವೀರ್ ವಹಿಸಿದ್ದರು. ಕಾರ್ಯದರ್ಶಿ ಡಿ.ರಮೇಶ್ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕು.ಅವನಿ ಎಂ ಗೌಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ಸಿಂಚನಾರನ್ನು ಸನ್ಮಾನಿಸಲಾಯಿತು. ಜಿ.ಆರ್.ದಿವಾಕರ ಜೇಸಿವಾಣಿ ಓದಿದರು. ಎಸ್.ಎಸ್.ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.