ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

KannadaprabhaNewsNetwork |  
Published : Jan 26, 2024, 01:46 AM IST
25ಎಚ್ಎಸ್ಎನ್12 :  ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮ ಪಂಚಾಯ್ತಿ ನೌಕರರು. | Kannada Prabha

ಸಾರಾಂಶ

ಸಿಐಟಿಯು ನೇತೃತ್ವದಲ್ಲಿ ನಡೆಸಲಾಗುತ್ತಿರುವ ಮೂರನೇ ದಿನದ ಪ್ರತಿಭಟನೆಯಲ್ಲಿ ಜಿಲ್ಲೆಯಲ್ಲಿ ಇರುವ ಎಲ್ಲಾ ಗ್ರಾಮ ಪಂಚಾಯಿತಿಗಳ ನೌಕರರಿಗೆ ಏಕಕಾಲದಲ್ಲಿ ಅನುಮೋದನೆ ನೀಡುವಂತೆ, ಬಾಕಿ ವೇತನ, ಕನಿಷ್ಠ ವೇತನ, ಗ್ರಾಚ್ಯುಟಿ ಮತ್ತು ಸೇವಾ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಗುರುವಾರ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಾಕಿ ವೇತನ, ಕನಿಷ್ಠ ವೇತನ, ಗ್ರಾಚ್ಯುಟಿ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹ । ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆಕನ್ನಡಪ್ರಭ ವಾರ್ತೆ ಹಾಸನ

ಸಿಐಟಿಯು ನೇತೃತ್ವದಲ್ಲಿ ನಡೆಸಲಾಗುತ್ತಿರುವ ಮೂರನೇ ದಿನದ ಪ್ರತಿಭಟನೆಯಲ್ಲಿ ಜಿಲ್ಲೆಯಲ್ಲಿ ಇರುವ ಎಲ್ಲಾ ಗ್ರಾಮ ಪಂಚಾಯಿತಿಗಳ ನೌಕರರಿಗೆ ಏಕಕಾಲದಲ್ಲಿ ಅನುಮೋದನೆ ನೀಡುವಂತೆ, ಬಾಕಿ ವೇತನ, ಕನಿಷ್ಠ ವೇತನ, ಗ್ರಾಚ್ಯುಟಿ ಮತ್ತು ಸೇವಾ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರವು ಕಳೆದ ೫ ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಒಟ್ಟು ೨೧೮೭೭ ಕೋಟಿ ರು.ಗಳಲ್ಲಿ ಇದುವರೆಗೂ ಕೇವಲ ೭೨೪೭ ಕೋಟಿ ರುಪಾಯಿಗಳನ್ನು ಮಾತ್ರ ನೀಡಿ, ಇನ್ನೂ ೧೪೬೩೦ ಕೋಟಿ ರು. ಬಾಕಿ ಉಳಿಸಿಕೊಂಡು ಕರ್ನಾಟಕ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ನೀಡದೆ ಜನರಿಗೆ ಸ್ಥಳೀಯವಾಗಿ ಅಲ್ಪಸ್ವಲ್ಪ ಇದ್ದ ಸೇವೆಯನ್ನು ಕಿತ್ತುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಿಂದ ಸಂಗ್ರಹಿಸುವ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳಲ್ಲಿ ರಾಜ್ಯಕ್ಕೆ ನೀಡಬೇಕಾದ ೧೫ನೇ ಹಣಕಾಸು ಆಯೋಗವು ನಿಗದಿ ಮಾಡಿದ ಪಾಲಿನಲ್ಲಿ ಈ ಹಿಂದೆ ೧೪ನೇ ಹಣಕಾಸಿನ ಆಯೋಗವು ಶೇ. ೪.೭೪% ರಷ್ಟು ಪಾಲು ಸಂದಾಯವಾಗಬೇಕು ಎಂಬುದನ್ನು ೧೫ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇಕಡ ೩.೬೪ಕ್ಕೆ ಇಳಿಸಿತು. ಹಣಕಾಸು ಆಯೋಗವು ಕಡಿಮೆ ಮಾಡುವುದಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನೀತಿಯಿಂದ ಕರ್ನಾಟಕ ರಾಜ್ಯಕ್ಕೆ ೩೬,೯೪೫ ಕೋಟಿ ರು. ಕೊಡದೆ ರಾಜ್ಯದ ಜನತೆಯನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೂರಿದರು.

ಸುಪ್ರಿಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿತು. ಸಂಘವು ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವಂತೆ ಹೋರಾಟ ರೂಪಿಸಿದ ಮೇಲೆ ಕಾರ್ಮಿಕ ಸಚಿವರು, ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ತಕ್ಷಣವೇ ಸರ್ಕಾರ ಕನಿಷ್ಠ ವೇತನ ೩೧,೦೦೦ ರು. ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ರಾಜ್ಯದ ಗ್ರಾಮ ಪಂಚಾಯಿತಿ ತಿಂಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ, ನೀರುಗಂಟಿ, ಸ್ವಚ್ಛತಾಗಾರರು. ಇತ್ಯಾದಿ ನೌಕರರು ಗ್ರಾಮ ಪಂಚಾಯಿತಿಗಳು ಆರಂಭವಾದ ಕಾಲದಿಂದಲೂ ಕನಿಷ್ಠ ಕೂಲಿ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವಿಲ್ಲದೆ ತಮ್ಮ ಜೀವಮಾನವೇ ದುಡಿದು ನಿವೃತ್ತಿಯಾದಾಗ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಬಹಳ ದುಃಸ್ಪರವಾಗಿದೆ. ತಕ್ಷಣ ಕನಿಷ್ಠ ೬೦೦೦ ರು. ಪಿಂಚಣಿ ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇವೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಡಿಯಲ್ಲಿ ಸಂಘಟಿತರಾಗಿ ನಿರಂತರವಾಗಿ ಹಲವು ವರ್ಷಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ಗ್ರಾ.ಪಂ. ನೌಕರರಿಗೆ ಕನಿಷ್ಠ ವೇತನ, ಅನುಮೋದನೆ, ಗ್ರಾಚ್ಯುಟಿ, ರಜಾ ಸೌಲಭ್ಯ, ಸೇವಾ ಮುಂಬಡ್ತಿ ಹಾಗೂ ಮತ್ತಿತರೆ ಸೇವಾ ಸೌಲಭ್ಯಗಳನ್ನು ನೀಡುವ ಆದೇಶಗಳನ್ನು ಹೊರಡಿಸಿದೆ. ಆದರೆ ಸರ್ಕಾರದ ಈ ಆದೇಶಗಳು ಹಾಸನ ಜಿಲ್ಲೆಯ ಗ್ರಾಪಂಗಳಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.

ನೌಕರರ ಅನುಮೋದನೆ ಪ್ರಸ್ತಾವನೆಗಳನ್ನು ಸಮರ್ಪಕವಾಗಿ ಒದಗಿಸದೆ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಗ್ರಾ.ಪಂ.ನೌಕರರ ಮುಖಂಡರಾದ ಕರಿಯಪ್ಪ, ಅಶೋಕ ಅತ್ನಿ, ನಂದೀಶ್ ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್, ಸೌಮ್ಯ, ಜಿ.ಪಿ.ಸತ್ಯನಾರಾಯಣ, ಎಂ.ಜಿ. ಪೃಥ್ವಿ ಇದ್ದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮ ಪಂಚಾಯಿತಿ ನೌಕರರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ