- 24 ಗಂಟೆ ಕಾದು ನೋಡುತ್ತೇವೆ, ಸ್ಪಂದಿಸದಿದ್ದರೆ ಸಿಎಂ ನಿವಾಸಕ್ಕೆ ಮುತ್ತಿಗೆ: ಬಸವರಾಜ - - -
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ, ಸಿಐಟಿಯು ಸಂಯೋಜಿತ ರಾಜ್ಯ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಗ್ರಾಮ ಪಂಚಾಯತಿ ನೌಕರರ 17 ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಡಿ.20ರಿಂದ ಅನಿರ್ದಿಷ್ಟಾವಧಿವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘದ ರಾಜ್ಯ ಉಪಾಧ್ಯಕ್ಷ, ದಾವಣಗೆರೆ ಉಸ್ತುವಾರಿ ಆರ್.ಎಸ್. ಬಸವರಾಜ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.20ರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 22ರಂದು ಮಧ್ಯಾಹ್ನ 2 ಗಂಟೆವರೆಗೆ ಕಾದು ನೋಡುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ನಂತರ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾ.ಪಂ.ಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ₹6 ಸಾವಿರ ಪಿಂಚಣಿ ಅಥವಾ ಗ್ರಾಮ ಸೇವಕರಿಗೆ ನೀಡಿದಂತೆ ಪಂಚಾಯಿತಿ ನೌಕರರಿಗೂ ₹10 ಲಕ್ಷ ಇಡಿಗಂಟು ನೀಡಬೇಕು. ತರಬೇತಿ ಪಡೆದಿರುವ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ಉದ್ಯೋಗ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವೀಕರಣ ಪದ್ಧತಿ ರದ್ದುಪಡಿಸಬೇಕು. 15ನೇ ಹಣಕಾಸಿನಲ್ಲಿ ವೇತನ ಪಾವತಿ ಮಾಡಬೇಕು. ಪ್ರತಿ ಪಂಚಾಯಿತಿಗೆ ಒಬ್ಬರೇ ಚಾಲಕರೆಂದು ₹15 ಸಾವಿರ ವೇತನ ನೀಡುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂಗೆ 2ನೇ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತಾರ್ಹ. ಆದರೆ, ಈಗಾಗಲೇ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು ಮುಂದುವರಿಸಬೇಕು. ಅಲ್ಲದೇ ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರು ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೆ ಅವಕಾಶ ನೀಡಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಶ್ರೀನಿವಾಸ್ ಆಚಾರಿ, ಓಂಕಾರಪ್ಪ, ಜಿ.ಎಸ್.ಬಸವರಾಜ್, ರಾಜೇಶ್ವರಿ ನ್ಯಾಮತಿ, ದಾನಪ್ಪ ಹೊನ್ನಾಳಿ ಇದ್ದರು.
- - -(ಬಾಕ್ಸ್)
* ಬೇಡಿಕೆಗಳೇನು? - ಗ್ರಾ.ಪಂ.ಗಳಲ್ಲಿ ಕಾರ್ಯನಿರ್ವಹಿಸುವ ಕರ ವಸೂಲಿಗಾರ, ಕ್ಲರ್ಕ್ ಕಂ ಡೇಟಾ ಆಪರೇಟರ್, ನೀರಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕು.- ಈಗಿನ ಬೆಲೆ ಏರಿಕೆ ಆಧಾರದಲ್ಲಿ ಪಂಚಾಯಿತಿ ನೌಕರರಿಗೆ ₹36000 ವೇತನ ನೀಡಬೇಕು.
- ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ಆರ್ಥಿಕ ಇಲಾಖೆಗೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವುದಕ್ಕೆ ಅನುಮೋದನೆ ಪಡೆಯಬೇಕು- - -