ಜೇನು ಕೃಷಿ ಆಸಕ್ತಿದಾಯಕ ಹಾಗೂ ಸವಾಲಿನ ವೃತ್ತಿ-ಶಾಸಕ ಅಶೋಕ್ ಕುಮಾರ್ ರೈ
ಕನ್ನಡಪ್ರಭವಾರ್ತೆ ಪುತ್ತೂರುಅಡಕೆ ಅವಲಂಬಿತರಿಗೆ ಜೇನು ಪೂರಕ ಕೃಷಿಯಾಗಿದ್ದು, ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿರುವ ಜೇನಿನ ಕೃಷಿ ಹೆಚ್ಚು ಆಸಕ್ತಿದಾಯಕ ಹಾಗೂ ಸವಾಲಿನ ವೃತ್ತಿಯಾಗಿದೆ. ಜೇನು ಕೃಷಿಗೆ ಉತ್ತಮ ಮಾರುಕಟ್ಟೆಯ ವ್ಯವಸ್ಥೆ ಆಗ ಬೇಕಾಗಿದೆ. ಶಾಲಾ ಮಕ್ಕಳಿಗೆ ಹಾಲು ಮೊಟ್ಟೆಗಳ ಜೊತೆಗೆ ಜೇನು ನೀಡಿದರೆ ಆರೋಗ್ಯಕ್ಕೆ ಉತ್ತಮವಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯಿಂದ ತನ್ನ ಸೇವೆ ಮತ್ತು ಉತ್ಪಾನೆಗಳ ಮಾಹಿತಿ ನೀಡುವ ಹೊಸ ಜಾಲತಾಣ ಅನಾವರಣ ಮತ್ತು ಕೃಷಿಕರ ಅನುಕೂಲಕ್ಕಾಗಿ ಜೇನು ಪೆಟ್ಟಿಗೆ ನಿರ್ವಹಣಾ ಸೇವೆ ಲೋಕಾರ್ಪಣೆ ಹಾಗೂ ಜೇನು ಕೃಷಿಕರ-ಸಾಧಕರ ಸಮ್ಮಿಲನ ಕಾರ್ಯಕ್ರಮವು ಶನಿವಾರ ಪುತ್ತೂರಿನ ರೋಟರಿ ಜಿ.ಎಲ್. ಸಭಾಂಗಣದಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮದಲ್ಲಿ ಗ್ರಾಮಜನ್ಯ ಜಾಲತಾಣವನ್ನು ಅನಾವರಣಗೊಳಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಜೇನು ಕೃಷಿಕರ ಕುರಿತು ಪ್ರೀತಿ, ಹೆಮ್ಮೆ ತನಗಿದೆ. ನಮ್ಮ ದೇಶದಲ್ಲಿ ಜೇನಿನ ಬಳಕೆ ಕಡಿಮೆ ಇದೆ. ಮಧುಮೇಹ ಸೇರಿದಂತೆ ಇತರ ರೋಗಿಗಳು ಸಕ್ಕರೆಗೆ ಬದಲಾಗಿ ಜೇನು ಬಳಸಬಹುದು. ದೇಶದಲ್ಲಿ ಜೇನಿನ ಮಾರುಕಟ್ಟೆ ಹೆಚ್ಚಬೇಕು. ಸಿಹಿ ತಿನಿಸುಗಳಲ್ಲೂ ಜೇನಿನ ಬಳಕೆ ಮಾಡಿದರೆ ಉತ್ತಮ. ಅಂಗನವಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಜೇನನ್ನೂ ಕೊಡುವ ವ್ಯವಸ್ಥೆ ಆಗಬೇಕು. ಜೇನಿನ ಉತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಸಾಧ್ಯವಾಗುವ ಎಲ್ಲಾ ಸಹಕಾರ ಮಾಡುವುದಾಗಿ ಅಶೋಕ್ ರೈ ಭರವಸೆ ನೀಡಿದರು.ತೋಟಗಾರಿಕೆ ಇಲಾಖೆ ದ.ಕ. ಜಿಲ್ಲಾ ಉಪ ನಿರ್ದೇಶಕ ಮಂಜುನಾಥ ಮಾತನಾಡಿ, ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ 1.20 ಲಕ್ಷ ಜೇನು ಪೆಟ್ಟಿಗೆ ಲಭ್ಯವಿದೆ. ಗ್ರಾಮಜನ್ಯ ಜೇನು ಪೆಟ್ಟಿಗೆ ನಿರ್ವಹಣೆ ಸೇವೆ ಸಮಯೋಚಿತವಾಗಿದೆ. ಜೇನಿನ ಸಂಸ್ಮರಣೆ ಹಾಗೂ ಗುಣಮಟ್ಟದ ದೃಷ್ಟಿಯಿಂದ ತಾಲೂಕಿನ ಮುಂಡೂರಿನಲ್ಲಿ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಅತಿ ದೊಡ್ಡ ಘಟಕದಿಂದ ಜೇನು ಕೃಷಿಯ ಬೆಳವಣಿಗೆಗೆ ಸಾಕಷ್ಟು ಪ್ರಯೋಜನವಾಗಲಿದೆ. ಇಲ್ಲಿ ದಿನವೊಂದಕ್ಕೆ 15 ಮೆಟ್ರಿಕ್ ತನಕದ ಜೇನು ಸಂಸ್ಕರಣೆ ಸಾಧ್ಯವಾಗಲಿದೆ ಎಂದು ಹೇಳಿದರುಜೇನು ಕೃಷಿಕರಿಗೆ ಗೌರವಾರ್ಪಣೆ:ಜೇನು ಕೃಷಿಗೆ ಸಂಬಂಧಿಸಿದಂತೆ ವಿಶೇಷ ಸಾಧನೆ ಮಾಡಿದ ಹಲವು ಮಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶ್ಯಾಮ ಭಟ್, ಹರೀಶ್ ಕೋಡ್ಲ, ಅಬ್ದುಲ್ ಗಫೂರ್ ನೆಕ್ಕಿಲಾಡಿ, ಆಸಿಕ್ ನೆಲ್ಲೂರು ಕಮ್ರಾಜೆ, ಮೋಹನಚಂದ್ರ ಪಿಲಿಕುಕ್ಕು, ವಸಂತ್ ಚೊಕ್ಕಾಡಿ, ಶ್ರೀಪಾದ ವಿಟ್ಲ, ಪ್ರವೀಣ್ ಕುಮಾರ್ ಈಶ್ವರಮಂಗಲ, ರಕ್ಷಿತ್ ಕೆ. ಐವರ್ನಾಡು, ಅಜಯ್ ಪೊಯ್ಯಮಜಲು, ಆದರ್ಶ ಪಿ.ಸಿ., ಲಿಂಗಪ್ಪ ಪಡ್ಪು, ಭರತ್ ರಾಜ್ ಸೊರಕೆ, ಸುರೇಶ್ ರೈ ಇರ್ದೆ, ಮುರಳೀಧರ್ ಏನೆಕಲ್ಲು, ದಿನೇಶ್ ಆರಾಧ್ಯ, ಸುಜೀತ್ ಚೊಕ್ಕಾಡಿ, ಗಣೇಶ್ ಕಡಬ ಅವರನ್ನು ಶಾಸಕರು ಗೌರವಿಸಿದರು.ಗ್ರಾಮ ಜನ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಮೂಲಚಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ನಿರಂಜನ್ ಪೋಳ್ಯ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ನಿರ್ದೇಶಕರು, ಸಿಬಂದಿ, ಜೇನು ಕೃಷಿಕರು ಪಾಲ್ಗೊಂಡರು.