ಶ್ರೀ ಜವೇನಹಳ್ಳಿ ಮಠದಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಭವ್ಯ ಮೆರವಣಿಗೆ
ನಗರದ ಹೊಸಲೈನ್ ರಸ್ತೆಯ ಪೊಲೀಸ್ ಕ್ವಾಟ್ರಸ್‌ನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಸಂಭ್ರಮದ ನಡುವೆ ಅದ್ಧೂರಿಯಾಗಿ ನಡೆಯಿತು.
ಜಾತ್ರೆಯ ಅಂಗವಾಗಿ ನಗರದ ಶ್ರೀ ಸಂಗಮೇಶ್ವರ ಬಡಾವಣೆ ಸಮೀಪದ ಶ್ರೀ ಜವೇನಹಳ್ಳಿ ಮಠದಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ನೂರಾರು ಮಹಿಳೆಯರು ಕಳಸ ಹೊತ್ತಿದ್ದ ಮೆರವಣಿಗೆ ಶ್ರೀ ಸಂಗಮೇಶ್ವರ ಸ್ವಾಮೀಜಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಜವೇನಹಳ್ಳಿ ಮಠದ ಆವರಣದಲ್ಲಿ ವಿಶೇಷ ಪೂಜೆ ನೆರವೇರಿದ ಬಳಿಕ ಅಲಂಕೃತ ರಥದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಮಹಿಳೆಯರು ತಲೆಯ ಮೇಲೆ ಅಲಂಕೃತ ಕಳಸಗಳನ್ನು ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಶ್ರೀ ಚಾಮುಂಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಕಳೆದ ನಾಲ್ಕು ದಶಕಗಳಿಂದ ಭಕ್ತರ ಅಪಾರ ಭಕ್ತಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ. ತಾಯಿಯ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಲಿ, ರೈತರ ಹೊಲಗಳಲ್ಲಿ ಸಮೃದ್ಧ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ಚಂಡಿಕಾ ಹೋಮದ ಪೂರ್ಣಾಹುತಿ ಬಳಿಕ ಸಾವಿರಾರು ಭಕ್ತರಿಗೆ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.