ಬಸವರಾಜ ನಂದಿಹಾಳಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಬಸವನನಾಡು ಬಸವನಬಾಗೆವಾಡಿಯಲ್ಲಿ ಇಂದು ಅಕ್ಷರ ಜಾತ್ರೆ ಜಾತ್ರೆ ನಡೆಯಲಿದೆ. ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ. ಸಮ್ಮೇಳನದ ಯಶಸ್ವಿಗೆ ಇವಣಗಿ ಗ್ರಾಮದ ಮುಖಂಡರು, ಗ್ರಾಮಸ್ಥರು, ಕಸಾಪ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ. ಈಗಾಗಲೇ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಇವಣಗಿ ಗ್ರಾಮವನ್ನು ಕನ್ನಡ ಬರಹಗಳಿಂದ ಹಾಗೂ ಸ್ವಾಗತ ಬ್ಯಾನರ್‌ಗಳಿಂದ ತುಂಬಿಸಲಾಗಿದೆ.ಪ್ರಮುಖ ರಸ್ತೆ ಬದಿಯ ಗೋಡೆಗಳನ್ನು, ಓವರ್ ಹೆಡ್ ಟ್ಯಾಂಕ್ ಮೇಲೆ ಸುಣ್ಣ-ಬಣ್ಣದಿಂದ ಅಂದಗೊಳಿಸಿ ನಾಡ-ನುಡಿ ಮಹತ್ವ ಸಾರುವ ಬರಹದೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸಲಾಗಿದೆ. ಸ್ವಾಗತ ಕಮಾನುಗಳು, ನಾಡ ಧ್ವಜಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗೆ ಇವಣಗಿ ಗ್ರಾಮಸ್ಥರು ಹೋಳಿಗೆ-ತುಪ್ಪ, ಬದನಿಕಾಯಿ ಪಲ್ಲ್ಯೆ, ಅನ್ನ-ಸಾಂಬಾರು ದಾಸೋಹದ ವ್ಯವಸ್ಥೆ ಮಾಡಲು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ನಾಲ್ಕೂವರೆ ಕ್ವಿಂಟಾಲ್ ಬೇಳೆ, ನಾಲ್ಕೂವರೆ ಕ್ವಿಂಟಾಲ್ ಬೆಲ್ಲ, ಐದು ಕ್ವಿಂಟಾಲ್ ಅಕ್ಕಿ ಸೇರಿದಂತೆ ವಿವಿಧ ದಿನಸಿ ಸಾಮಾನುಗಳನ್ನು, ತರಕಾರಿ ಖರೀದಿಸಲಾಗುತ್ತಿದೆ ಎಂದು ಗ್ರಾಮದ ನಿಂಗಣ್ಣ ಬಾಗೇವಾಡಿ, ಚಂದ್ರಶೇಖರ ಸುಭಾನಪ್ಪರ ಹೇಳಿದರು.ಸಮ್ಮೇಳನದ ಪ್ರಧಾನ ವೇದಿಕೆಗೆ ವರದಾನಿ ಲಕ್ಕಮ್ಮ ದೇವಿಯ ಹೆಸರು, ಮುಖ್ಯದ್ವಾರಕ್ಕೆ ಸಾಂಸ್ಕೃತಿಕ ನಾಯಕ ಬಸವೇಶ್ವರರ ಹೆಸರು, ದಾಸೋಹ ಮನೆಗೆ ಅರವತ್ಮೂರು ಪುರಾತನರ ಶರಣರ ದಾಸೋಹ ಮನೆ ಎಂದು ಹೆಸರು, ಪುಸ್ತಕ ಮಳಿಗೆಗೆ ವರಕವಿ ಡಾ.ದ.ರಾ,ಬೇಂದ್ರೆ ಹೆಸರು ನಾಮಕರಣ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು. ತಾಲೂಕು ಸಮ್ಮೇಳನದ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಡಿ.೨ ರಂದು ರಜೆ ಘೋಷಿಸಲಾಗಿದೆ. ಈ ರಜೆಯನ್ನು ಡಿ.೮ರಂದು(ಭಾನುವಾರ) ಪೂರ್ಣ ದಿನ ಶಾಲೆಯನ್ನು ನಡೆಸುವ ಮೂಲಕ ಸರಿದೂಗಿಸಬೇಕೆಂದು ಬಿಇಒ ವಸಂತ ರಾಠೋಡ ಆದೇಶಿಸಿದ್ದಾರ.ಒಂಬತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮನಗೂಳಿ ಪಟ್ಟಣದಲ್ಲಿ ಶರಣ ಸಾಹಿತಿ ಈರಣ್ಣ ಬೆಕಿನಾಳ ಸರ್ವಾಧ್ಯಕ್ಷತೆಯಲ್ಲಿ ಡಿ.೨೫ರ ೨೦೨೩ರಲ್ಲಿ ಜರುಗಿತ್ತು. ಇದೀಗ ಹತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇವಣಗಿ ಗ್ರಾಮದಲ್ಲಿ ಸಿದ್ರಾಮಪ್ಪ ಬಿರಾದಾರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಸಮ್ಮೇಳನವನ್ನು ಕಣ್ಣುತುಂಬಿಸಿಕೊಳ್ಳಲು ಕನ್ನಡಾಭಿಮಾನಿಗಳು ಕಾತರರಾಗಿದ್ದಾರೆ.ಬಾಕ್ಸ್