ಕನ್ನಡಪ್ರಭ ವಾತೆ ಕಾರಟಗಿಕನಕದಾಸರು ಸ್ವಾಭಿಮಾನ, ಸ್ಪೂರ್ತಿಯ ಸೆಲೆಯಾಗಿದ್ದರು. ಸಮಾಜದ ಎಲ್ಲ ವರ್ಗದ ಜನರು ಆತ್ಮಗೌರವದೊಂದಿಗೆ ಬಾಳುವಂತೆ ಶಕ್ತಿ ತುಂಬಿದ್ದು, ಅವರೊಬ್ಬ ಮಹಾನ್ ಶ್ರೇಷ್ಠ ದಾರ್ಶನಿಕ ಕವಿ ಎಂದು ಹಾಲುಮತ ಸಮಾಜದ ತುರುವಿಹಾಳ ಗುರುವಿನಮಠದ ಮಾದಯ್ಯಸ್ವಾಮಿ ಗುರುವಿನ್‌ಮಠ ಹೇಳಿದರು.ಪಟ್ಟಣದ ಕನಕ ಭವನ ಭವನದಲ್ಲಿ ನಡೆದ ಶ್ರೇಷ್ಠ ದಾರ್ಶನಿಕ ಕನಕದಾಸ ೫೩೭ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಸರಳ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದ ಸತ್ಯವನ್ನು ಜಗತ್ತಿಗೆ ಸಾರಿದರು. ಅವರ ಕೀರ್ತನೆ ಈ ಭೂಮಿಯ ಮೇಲೆ ಸರ್ವಕಾಲಿಕ. ಮೇಲು ಕೀಳು ಮತ್ತು ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಮಹಾನುಭಾವರು. ಸರಳ ವಾಕ್ಯಗಳಲ್ಲಿ ಮನವರಿಕೆ ಮಾಡಿಕೊಟ್ಟ ಅವರ ಆಚಾರ-ವಿಚಾರಗಳು ನಮಗೆ ದಾರಿದೀಪ. ಈ ವಿಚಾರಗಳನ್ನೆಲ್ಲ ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳಬೇಕಾಗಿದೆ. ಕನಕದಾಸರ ಸಾಹಿತ್ಯವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಶ್ರೀಗಳು ಕರೆ ನೀಡಿದರು.ಅಗ್ನಿಕುಂಡ ದ್ಯಾವಮ್ಮದೇವಿ ಆರಾಧಕ ಭೀಮೇಶಪ್ಪಜ್ಜ ಮಾತನಾಡಿ, ಕನಕದಾಸರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಮೂಢನಂಬಿಕೆ ಕಂದಾಚಾರಗಳ ವಿರುದ್ಧ ಆಗಿನ ಕಾಲದಲ್ಲಿ ಧ್ವನಿ ಎತ್ತಿದವರು. ಅವರ ಮಾನವೀಯ ಮೌಲ್ಯಗಳು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು. ಉಪನ್ಯಾಸಕ ಡಾ. ಉಮೇಶ ಗುರಿಕಾರ ಉಪನ್ಯಾಸ ನೀಡಿದರು. ಗಂಗಪ್ಪ, ಸಿಆರ್‌ಪಿ ಭೀಮಣ್ಣ ಮತ್ತು ಹನುಮೇಶ ಕಾರ್ಯಕ್ರಮ ನಿರ್ವಹಿಸಿದರು.ಮೆರವಣಿಗೆ: ಕಾರ್ಯಕ್ರಮದ ಮುನ್ನ ಪಟ್ಟಣದ ಹೊರವಲಯದ ೩೧ನೇ ವಿತರಣಾ ಕಾಲುವೆಯಿಂದ ದಾಸ ಶ್ರೇಷ್ಠ ಕನಕದಾಸರ ಭವ್ಯ ಮೆರವಣಿಗೆ ನಡೆಯಿತು. ಬಸಾಪಟ್ಟಣದ ನಂಜುಂಡೇಶ್ವರಸ್ವಾಮಿ ಮಠದ ಸಿದ್ದರಾಮಯ್ಯಸ್ವಾಮಿ ಗುರುವಿನಮಠ ಮತ್ತು ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಗಮನ ಸೆಳೆಯಿತು. ನಿವೃತ್ತ ಪಿಎಸ್‌ಐ ಮಲ್ಲಪ್ಪ, ವಿಠ್ಠಲ್ ಜೀರಗಾಳಿ, ಪುರಸಭೆ ಮಾಜಿ ಸದಸ್ಯ ಹೊಳೆಯಪ್ಪ ದೇವರಮನಿ, ಸಂಜೀವಪ್ಪ ಸಾಲೋಣಿ, ರಮೇಶ ಹತ್ತಿಕಾಳ, ಜಿ.ಕೆ. ರವಿ, ಶರಣಪ್ಪ ಪರಕಿ, ಪರಶುರಾಮ ಸಾಲೋಣಿ, ಸೋಮನಾಥ ಗಚ್ಚಿನಮನಿ ಸೇರಿದಂತೆ ಇತರರಿದ್ದರು.