ಬೆಳ್ಳಿ ರಥದಲ್ಲಿ ಅದ್ಧೂರಿ ಅಂಬೇಡ್ಕರ್ ಮೆರವಣಿಗೆ

KannadaprabhaNewsNetwork | Published : Apr 15, 2025 12:53 AM

ಸಾರಾಂಶ

ಕೊಳ್ಳೇಗಾಲದ ಭೀಮನಗರದ ಸಾವಿತ್ರಿಬಾಯಿ ಫುಲೆ ಜ್ಞಾನ ಮಂದಿರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮೆರವಣಿಗೆ ಸಮಾರಂಭಕ್ಕೆ ಶಾಸಕ ಕೃಷ್ಣಮೂರ್ತಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವರತ್ನ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಮಹೋತ್ಸವದ ಹಿನ್ನೆಲೆ ಆಯೋಜಿಸಿದ್ದ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಿ ಗಮನ ಸೆಳೆಯಿತು. ಪಟ್ಟಣದ ಭೀಮನಗರದ ಸಾವಿತ್ರಿಬಾಯಿ ಫುಲೆ ಜ್ಞಾನ ಮಂದಿರ ಮುಂಭಾಗದಲ್ಲಿ ಅಲಂಕಾರಗೊಂಡಿದ್ದ ಬೆಳ್ಳಿರಥದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರ ಪ್ರತಿಷ್ಠಾಪಿಸಿದ ಬಳಿಕ ಶಾಸಕ ಎ.ಆರ್. ಕೃಷ್ಣಮೂರ್ತಿ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಭೀಮನಗರದಿಂದ ವಿವಿಧ ಕಲಾತಂಡಗಳೊಂದಿಗೆ ಹೊರಟ ಬೆಳ್ಳಿರಥ ಮೆರವಣಿಗೆ ಆನಂದಜ್ಯೋತಿ ಕಾಲೋನಿ ರಸ್ತೆ, ಬೆಂಗಳೂರು ರಸ್ತೆ, ಡಾ.ಅಂಬೇಡ್ಕರ್ ಪ್ರತಿಮೆ ವೃತ್ತ, ಅಂಬೇಡ್ಕರ್ ರಸ್ತೆ ಗುರುಕಾರ್ ವೃತ್ತ, ಎಂಜಿ‌ಎಸ್ವಿ ಕಾಲೇಜು ರಸ್ತೆ ಮೂಲಕ ಸಾಗಿ ನ್ಯಾಷನಲ್ ಶಾಲಾ ಮೈದಾನಕ್ಕೆ ತಲುಪಿ ಮೆರವಣಿಗೆಗೆ ತೆರೆಬಿದ್ದಿತು.ಮೆರವಣಿಗೆಯುದ್ದಕ್ಕೂ ಅಂಬೇಡ್ಕರ್ ಅಭಿಮಾನಿಗಳು ನರ್ತಿಸಿ ಜೈ ಭೀಮ್ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು. ಕಲಾತಂಡಗಳು ಸಹಾ ಮೆರವಣಿಗೆಗೆ ಕಳೆ ತಂದವು. ಈ ವೇಳೆ ಪಾಲ್ಗೊಂಡಿದ್ದ ನೂರಾರು ಮಂದಿ ಅಂಬೇಡ್ಕರ್ ಅನುಯಾಯಿಗಳು ನೀಲಿ ಶಲ್ಯ ಧರಿಸಿ ಗಮನ ಸೆಳೆದರು.

ಕಳೆದ 3 ದಿನಗಳಿಂದಲೂ ಅಂಬೇಡ್ಕರ್‌ ಜಯಂತಿ ಹಿನ್ನೆಲೆ ಪಟ್ಟಣ ವ್ಯಾಪ್ತಿಯಲ್ಲಿನ ಮುಖ್ಯರಸ್ತೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಾಲಂಕಾರಗೊಳಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಹಿನ್ನೆಲೆ ಪಟ್ಟಣ ಮದುವಣಗಿತ್ತಿಯಂತೆ ಗಮನ ಸೆಳೆಯಿತು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಮಾಜಿ ಅದ್ಯಕ್ಷ ರಮೇಶ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ ಕುಂತೂರು ಮೋಳೆ, ಭೀಮನಗರ ದೊಡ್ಡ ಯಜಮಾನರು ಚಿಕ್ಕಮಾಳಿಗೆ, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಶಿಲ್ದಾರ್ ಬಸವರಾಜು, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಡಿವೈಎಸ್ಪಿ ಧರ್ಮೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕೇಶವಮೂರ್ತಿ, ಬಿಇಒ ಮಂಜುಳಾ, ನಗರಸಭೆ ಪ್ರಭಾರಿ ಆಯುಕ್ತ ಪರಶಿವ, ಸದಸ್ಯರುಗಳಾದ ಮಾನಸ ಪ್ರಭುಸ್ವಾಮಿ, ಭಾಗ್ಯಮ್ಮ, ಧರಣೀಶ, ಮಂಜುನಾಥ್, ಬಸ್ತಿಪುರ ಶಾಂತು, ಯುವ ಮುಖಂಡ ಸುರೇಶ್, ತೋಟೇಶ್, ಬಸ್ತಿಪುರ ರವಿ ಇನ್ನಿತರರು ಹಾಜರಿದ್ದರು.

Share this article