ಮೇಲುಕೋಟೆ: ದಕ್ಷಿಣ ಬದರೀಕಾಶ್ರಮವೂ ಕ್ಷೇತ್ರ ದೇವತೆ ಶ್ರೀಬದರೀನಾರಾಯಣಸ್ವಾಮಿ ಜಯಂತಿ ಹಸ್ತ ನಕ್ಷತ್ರದ ಶುಭದಿನವಾದ ಭಾನುವಾರ ವೈಭವದಿಂದ ನೆರವೇರಿತು.
ಅರವಿಂದವಲ್ಲೀ ಸಮೇತನಾದ ಬದರೀನಾರಾಯಣಸ್ವಾಮಿಗೆ ಬೆಳಗ್ಗೆ ವೇದಮಂತ್ರ ಮತ್ತು ಮಂಗಳವಾದ್ಯದೊಂದಿಗೆ ಅಭಿಷೇಕ ನೆರವೇರಿತು. ಹಾಲು, ಮೊಸರು, ಜೇನು, ಹರಿಷಿಣ ಮುಂತಾದ ಮಂಗಳದ್ರವ್ಯಗಳಿಂದ ಸ್ನಪನಪೂರ್ವಕವಾಗಿ ಅಭಿಷೇಕ ನೆರವೇರಿತು. ಮಧ್ಯಾಹ್ನ ದಿವ್ಯಪ್ರಬಂಧ ಪಾರಾಯಣ ಹಾಗೂ ಮಹಾ ಮಂಗಳಾರತಿ ಶಾತ್ತುಮೊರೈ ನೆರವೇರಿತು. ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪರಿಶ್ರಮದಲ್ಲಿ ಬದರೀನಾರಾಯಣಸ್ವಾಮಿ ಜಯಂತ್ಯುತ್ಸವದ ಕಾರ್ಯಕ್ರಮಗಳು ಶ್ರದ್ಧಾಭಕ್ತಿಂದ ನೆರವೇರಿದವು. ಈ ವೇಳೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನೂರಾರು ಭಕ್ತರು ಭಾಗವಹಿಸಿದ್ದರು.
ದೇಗುಲಕ್ಕೆ ಬೇಕಿದೆ ಕಾಯಕಲ್ಪ:ರಾಜ್ಯಪ್ರಾಚ್ಯವಸ್ತು ಇಲಾಖೆಗೆ ಸೇರಿದ ಪುರಾತನ ಬದರೀನಾರಾಯಣಸ್ವಾಮಿ ದೇಗುಲ ಮಳೆ ವೇಳೆ ಕೊಳದಂತಾಗುತ್ತಿದ್ದು ತೊಲೆಗಳು ಕುಸಿದಿದ್ದು ಗೋಡೆ ಬಿರುಕು ಬಿಟ್ಟು ಅಪಾಯವನ್ನು ಆಹ್ವಾನಿಸುವ ಹಂತ ತಲುಪಿ ನಾಲ್ಕು ವರ್ಷವಾಗುತ್ತಾ ಬಂದಿದ್ದರೂ ಅಧಿಕಾರಿಗಳು ದೇಗುಲದ ಜೀರ್ಣೋದ್ಧಾರಕ್ಕೆ ಕ್ರಮವಹಿಸಿಲ್ಲ ಎಂದು ಭಕ್ತರು ಅಸಮಧಾನ ವ್ಯಕ್ತಪಡಿಸಿದ್ದಾರೆ.