ಶಿಗ್ಗಾಂವಿ: ಇಲ್ಲಿಯ ಶರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿ ಮಹೋತ್ಸವವನ್ನು ಮಂಗಳವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಜಯಂತಿ ನಿಮಿತ್ತ ವೀರಭದ್ರೇಶ್ವರ ಸ್ವಾಮಿಗೆ ಸಕಲ ಅಭಿಷೇಕ ಹಾಗೂ ರುದ್ರಾಭೀಷೇಕವನ್ನು ಮಲ್ಲಯ್ಯ ಹಿರೇಮಠ ಅವರು ವೈದಿಕತ್ವ ನೆರವೇರಿಸಿದರು. ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು.
ನಂತರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಸೇವೆ ಸಕಲ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವವು ಭಕ್ತರ ಜಯಘೋಷದ ನಡುವೆ ಸಾಗಿತು. ಪುರವಂತರಿಂದ ಮುತ್ತಿನ ಆರತಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನೆರವೇರಿದವು. ಮುತ್ತೈದೆಯರು ಹಾಗೂ ಪೂಜ್ಯರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.ವೀರಗಾಸೆ ಹಾಗೂ ಪುರವಂತಿಕೆ ಕಲಾವಿದರಿಂದ ನಡೆದ ಧಾರ್ಮಿಕ-ಸಾಂಸ್ಕೃತಿಕ ಪ್ರದರ್ಶನವು ಜಯಂತಿ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ವೀರಭದ್ರೇಶ್ವರ ಸ್ವಾಮಿಯ ಪರಂಪರೆಯನ್ನು ಪ್ರತಿಬಿಂಬಿಸುವ ವೀರಗಾಸೆ ಕಲಾವಿದರ ಸೇವೆಯನ್ನು ಭಕ್ತರು ಭಕ್ತಿಭಾವದಿಂದ ವೀಕ್ಷಿಸಿದರು.
ನಿರ್ಮಲ ಹರವಿ, ಪವಿತ್ರ ವನ್ಹಹಳ್ಳಿ, ನೀಲಮ್ಮ ಗೊಟಗೋಡಿ, ಅನ್ನಪೂರ್ಣ ಹರವಿ, ನೀಲಮ್ಮ ವನಹಳ್ಳಿ, ಲಕ್ಷ್ಮಿ ಮುಂಡಗೋಡ ಸೇರಿದಂತೆ ನೂರಾರು ಮುತ್ತೈದೆಯರು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು.
ನೂರಾರು ಭಕ್ತರ ಸಮಾಗಮದಿಂದ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಶ್ರೀ ವೀರಭದ್ರೇಶ್ವರ ಜಯಂತಿ ಮಹೋತ್ಸವವು ಶಿಗ್ಗಾಂವಿ ನಗರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತಿದ್ದು, ಭಕ್ತಿ-ಶ್ರದ್ಧೆಯಿಂದ ಸಂಪನ್ನಗೊಂಡಿತು.