ಕೇಣಿ ಯೋಜನೆ ಬಗ್ಗೆ ಶೀಘ್ರ ತೀರ್ಮಾನ: ಸಚಿವ ಬಸವಂತಪ್ಪ

KannadaprabhaNewsNetwork |  
Published : Sep 16, 2026, 02:15 AM IST
ಸುದ್ದಿಗಾರರ ಜತೆ ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿದರು. | Kannada Prabha

ಸಾರಾಂಶ

ವಿರೋಧ ವ್ಯಕ್ತವಾಗಿರುವ ಕೇಣಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪ್ರವಾಸೋದ್ಯಮ ಹಾಗೂ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೂ ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ಕಾರವಾರ: ಜಿಲ್ಲೆಯ ಮೀನುಗಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ನಡೆಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.ಮೀನುಗಾರಿಕಾ ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ಕಾರವಾರ ಜಿಲ್ಲೆಗೆ ಭೇಟಿ ನೀಡಿದ ಅವರು ಮಾದ್ಯಮಗಳೊಂದಿಗೆ ಮಾತನಾಡಿದರು.ವಿರೋಧ ವ್ಯಕ್ತವಾಗಿರುವ ಕೇಣಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು, ಪ್ರವಾಸೋದ್ಯಮ ಹಾಗೂ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೂ ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ ಎಂದರು.ಮೀನುಗಾರಿಕಾ ಬಂದರುಗಳಲ್ಲಿ ಹೂಳು ತುಂಬಿ ಬೋಟ್‌ಗಳಿಗೆ ಹಾನಿಯಾಗುತ್ತಿರುವ ದೂರುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳೊಂದಿಗೆ ಸ್ಥಳಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಹೂಳೆತ್ತುವಿಕೆ ಹಾಗೂ ಕಡಲಕೊರೆತ ತಡೆ ಕಾಮಗಾರಿಗಳಿಗೆ ನಿರಂತರ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.ಸಮುದ್ರದಲ್ಲಿ ಅನಾಹುತಕ್ಕೀಡಾಗುವ ಮೀನುಗಾರರ ರಕ್ಷಣೆಗೆ ಉದ್ದೇಶಿಸಿರುವ ಸಮುದ್ರ ಆ್ಯಂಬುಲೆನ್ಸ್ ಯೋಜನೆಯ ಅನುಷ್ಠಾನದಲ್ಲಿನ ವಿಳಂಬದ ಕುರಿತು ಶೀಘ್ರವೇ ಪರಿಶೀಲನೆ ನಡೆಸಲಾಗುವುದು. ಮೆರಿಟೈಮ್ ಬೋರ್ಡ್ ಸಂಸ್ಥೆಯ ಸಿಬ್ಬಂದಿಗೆ ವೇತನ ಪಾವತಿಯಲ್ಲಿ ಎದುರಾಗಿರುವ ಸಮಸ್ಯೆ ಹಾಗೂ ಅನುದಾನದ ಕೊರತೆಯ ಬಗ್ಗೆಯೂ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.ನೈಜ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯು ಅನರ್ಹರಿಗೆ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಚನಾಮೆ ವರದಿ ಹಾಗೂ ಮೀನುಗಾರಿಕೆ ಸೊಸೈಟಿಯ ಸದಸ್ಯತ್ವದ ದಾಖಲೆಗಳನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲಿಸಲಿದೆ. ಅರ್ಹ ನೈಜ ಮೀನುಗಾರರಿಗೆ ಮಾತ್ರ ಪರಿಹಾರ ತಲುಪುವಂತೆ ಸೂಕ್ತ ಮಾರ್ಗಸೂಚಿ ರೂಪಿಸಲಾಗುವುದು ಎಂದರು.ಇನ್ನು ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರ್ಬಳಕೆಯಾಗದಂತೆ ತಡೆದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಶಾಲೆಗಳು ಹಾಗೂ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ನಿಗಾ ವಹಿಸಲಾಗುವುದು ಎಂದರು.ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ವಿಷಯವನ್ನು ಕಾನೂನಾತ್ಮಕವಾಗಿ ಎದುರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ