ಮೀನುಗಾರರಿಗೆ ತೊಂದರೆಯಾಗದಂತೆ ಬಂದರು ಅಭಿವೃದ್ಧಿ ಕೈಗೊಳ್ಳಿ: ಸಚಿವ ಕೆ.ಎಸ್. ಬಸವಂತಪ್ಪ

KannadaprabhaNewsNetwork |  
Published : Sep 16, 2026, 02:15 AM IST
ಅಧಿಕಾರಿಗಳ ಜತೆ ಸಚಿವ ಕೆ.ಎಸ್. ಬಸವಂತಪ್ಪ ಚರ್ಚಿಸಿದರು. | Kannada Prabha

ಸಾರಾಂಶ

ಬಂದರಿನ ಅಭಿವೃದ್ಧಿಯ ಭಾಗವಾಗಿ ಪ್ರಸ್ತಾವಿತ ಬ್ರೇಕ್‌ವಾಟರ್ ನಿರ್ಮಾಣದ ನೀಲನಕ್ಷೆಯನ್ನು ಪರಿಶೀಲಿಸಿದ ಸಚಿವರು, ಯೋಜನೆಯ ವಿವಿಧ ಅಂಶಗಳು ಹಾಗೂ ಕಾಮಗಾರಿಗಳ ಸಾಧ್ಯತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಾರವಾರ: ಸಾಗರಮಾಲಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಬಂದರು ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಂದ ಸ್ಥಳೀಯ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಕೆ.ಎಸ್. ಬಸವಂತಪ್ಪ ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಕಾರವಾರ ವಾಣಿಜ್ಯ ಬಂದರಿಗೆ ಭೇಟಿ ನೀಡಿದ ಸಚಿವರು, ಬಂದರು ಅಭಿವೃದ್ಧಿ ಹಾಗೂ ಸಾಗರಮಾಲಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಕಾರವಾರ ಬಂದರು ವಿಸ್ತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್ ಅವರು, ಬಂದರಿನ ಪ್ರಸ್ತುತ ಸ್ಥಿತಿ, ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳು ಹಾಗೂ ಸ್ಥಳೀಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಚಿವರಿಗೆ ವಿವರಿಸಿದರು. ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆಗೆ ಸ್ಥಳೀಯ ಮೀನುಗಾರರಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ, ಅಭಿವೃದ್ಧಿ ಕಾಮಗಾರಿಗಳು ಮೀನುಗಾರರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಬಂದರಿನ ಅಭಿವೃದ್ಧಿಯ ಭಾಗವಾಗಿ ಪ್ರಸ್ತಾವಿತ ಬ್ರೇಕ್‌ವಾಟರ್ ನಿರ್ಮಾಣದ ನೀಲನಕ್ಷೆಯನ್ನು ಪರಿಶೀಲಿಸಿದ ಸಚಿವರು, ಯೋಜನೆಯ ವಿವಿಧ ಅಂಶಗಳು ಹಾಗೂ ಕಾಮಗಾರಿಗಳ ಸಾಧ್ಯತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾರವಾರ ವಾಣಿಜ್ಯ ಬಂದರಿನ ವೈಶಿಷ್ಟ್ಯಗಳು ಮತ್ತು ಭವಿಷ್ಯದ ಅಭಿವೃದ್ಧಿ ಅವಕಾಶಗಳ ಬಗ್ಗೆಯೂ ಅವರು ವಿವರ ಪಡೆದುಕೊಂಡರು.ಕಾರವಾರ ವಾಣಿಜ್ಯ ಬಂದರಿಗೆ ಭೇಟಿ ನೀಡಿದ ಸಚಿವ ಬಸವಂತಪ್ಪ ಅವರು ಕೆಲಕಾಲ ಟಗ್‌ನಲ್ಲಿ ಸಮುದ್ರ ಸಂಚಾರ ನಡೆಸಿದರು. ಸಮುದ್ರದ ಮೂಲಕ ಬಂದರಿನ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿದ ಅವರು, ಬಂದರು ಅಭಿವೃದ್ಧಿ, ಸಾಗರಮಾಲಾ ಯೋಜನೆ, ಮೀನುಗಾರಿಕೆ ಹಾಗೂ ಮೀನುಗಾರರ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಎಸ್ಪಿ ದೀಪನ್ ಎಂ.ಎನ್. ಸೇರಿದಂತೆ ಬಂದರು ಇಲಾಖೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ