ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕನ್ನಡಪ್ರಭ’, ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಇಲ್ಲಿನ ಬಗಲಕುಂಟೆಯ ಎಂಇಐ ಲೇಔಟ್ ಮೈದಾನದಲ್ಲಿ ಮೂರು ದಿನ ನಡೆದ ‘ದಾಸರಹಳ್ಳಿ ಸಂಭ್ರಮ’ ಅದ್ಧೂರಿಯಾಗಿ ತೆರೆ ಕಂಡಿದೆ.
ಕೊನೆಯ ದಿನವಾದ ಭಾನುವಾರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಸಾವಿರಾರು ಜನತೆ ಪಾಲ್ಗೊಂಡು ವಾರಾಂತ್ಯವನ್ನು ಸಂಭ್ರಮಿಸಿದರು.
ಭಾನುವಾರ ಬೆಳಗ್ಗೆಯಿಂದಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಗಾಗಿ ಮುದ್ದು ಮಗು ಮತ್ತು ವೇಷಭೂಷಣ ಸ್ಪರ್ಧೆ, ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಹಲವರು ಪಾಲ್ಗೊಂಡಿದ್ದರು.
ಮಧ್ಯಾಹ್ನದ ಬಳಿಕ ನಡೆದ ‘ಅಡುಗೆ ಮಹಾರಾಣಿ’ ಸ್ಪರ್ಧೆಯ ಫಿನಾಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಹಿಳೆಯರು ಗೆದ್ದು ಬೀಗಿದರು. ಬಳಿಕ ನಡೆದ ‘ಸೇವ್ ನೇಚರ್ ಸೇವ್ ವರ್ಲ್ಡ್ ’ ಪರಿಕಲ್ಪನೆಯ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಚಿತ್ರ ಬರೆದರು.
ಸಂಜೆ ಎಲ್ಲ ಸ್ಪರ್ಧೆಗಳ ವಿಜೇತರು ಹಾಗೂ ದಾಸರಹಳ್ಳಿಯ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ‘ಅಡುಗೆ ಮಹಾರಾಣಿ’ ಸ್ಪರ್ಧೆಯ ತೀರ್ಪುಗಾರರಾಗಿ ಬ್ರಹ್ಮಾಂಡ ಗುರೂಜಿ ಆಗಮಿಸಿದ್ದರು.
ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಮತ್ತು ತುಕಾಲಿ ಸಂತೋಷ್ ಆಗಮಿಸಿದ್ದರು.
ಒಂದು ಸರಳ ಪ್ರೇಮಕತೆ ನಾಯಕ ವಿನಯ್ ರಾಜ್‌ಕುಮಾರ್, ನಟಿ ಸ್ವಾತಿಷ್ಟಾ ಕೃಷ್ಣನ್ ಆಗಮಿಸಿ ನೆರೆದವರಲ್ಲಿ ಫೆ. 8ರಂದು ಬಿಡುಗಡೆ ಆಗುತ್ತಿರುವ ಚಿತ್ರವನ್ನು ನೋಡುವಂತೆ ಕೋರಿಕೊಂಡರು. ನೆಚ್ಚಿನ ನಟರ ಆಗಮನದಿಂದ ಕಾರ್ಯಕ್ರಮದ ಸಂಭ್ರಮ ಇಮ್ಮಡಿಯಾಗಿತ್ತು.
ಸಂಜೆ 7ರಿಂದ ಮಿಮಿಕ್ರಿ ಗೋಪಿ ಮತ್ತು ಸಂಗೀತ ಸಂಜೆ ರಶ್ಮಿ ಶ್ರೀನಿವಾಸ್ ಅವರು ನಡೆಸಿಕೊಟ್ಟ ಕಾರ್ಯಕ್ರಮ ನೆರೆದವರ ಮನಸೆಳೆಯಿತು.
ಬಳಿಕ ಇಂಡಿಯನ್ ಫೋಕ್ ಮ್ಯೂಸಿಕ್ ಬ್ಯಾಂಡ್ ‘ ಜಂಭೆ ಝಲಕ್’ ಬಾಲು ಹಾಗೂ ತಂಡದವರು ನೀಡಿದ ಅದ್ಭುತ ವಾದ್ಯ ವಾದನಕ್ಕೆ ಪ್ರೇಕ್ಷಕರು ಮನಸೋತರು.
ಅಷ್ಟೇ ಅಲ್ಲದೆ ನಂತರ ನಡೆದ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮ ದಾಸರಹಳ್ಳಿ ಜನತೆಯ ಮನರಂಜಿಸುವಲ್ಲಿ ಯಶಸ್ವಿಯಾಯಿತು.
ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಆಗಮಿಸಿದ್ದರು. ಫುಡ್ ಕೋರ್ಟ್‌ನಲ್ಲಿನ ದೇಸಿ ಖಾದ್ಯ ದೋಸೆ, ಪುಳಿಯೊಗರೆ, ಕರದಂಟು, ಮಿರ್ಚಿ ಬಜ್ಜಿಗಳನ್ನು ಸವಿದು ಖುಷಿಪಟ್ಟರು. ಜೊತೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.