ನಾಳೆಯಿಂದ ಅದ್ಧೂರಿ ಕರಾವಳಿ ಉತ್ಸವ: ಜಿಲ್ಲಾಧಿಕಾರಿ

KannadaprabhaNewsNetwork |  
Published : Dec 21, 2025, 03:30 AM IST
 | Kannada Prabha

ಸಾರಾಂಶ

ಕಡಲ ನಗರಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಡಿ. 22ರಿಂದ 28ರವರೆಗೆ ಏಳು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಕರಾವಳಿ ಉತ್ಸವ-2025ಕ್ಕೆ ಸಿದ್ಧತೆ ಸಮರೋಪಾದಿಯಲ್ಲಿ ಸಾಗಿವೆ.

ಸಪ್ತಾಹ ಸಂಭ್ರಮಕ್ಕೆ ಕಡಲ ನಗರಿ ಸಜ್ಜು । ಸಮರೋಪಾದಿಯಲ್ಲಿ ಸಿದ್ಧತೆ: ಲಕ್ಷ್ಮೀಪ್ರಿಯಾ

ಕನ್ನಡಪ್ರಭ ವಾರ್ತೆ ಕಾರವಾರ

ಕಡಲ ನಗರಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಡಿ. 22ರಿಂದ 28ರವರೆಗೆ ಏಳು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಕರಾವಳಿ ಉತ್ಸವ-2025ಕ್ಕೆ ಸಿದ್ಧತೆ ಸಮರೋಪಾದಿಯಲ್ಲಿ ಸಾಗಿವೆ. 2018ರ ನಂತರ, ಅಂದರೆ ಸುಮಾರು ಎಂಟು ವರ್ಷಗಳ ದೀರ್ಘ ಅವಧಿಯ ಬಳಿಕ ಈ ಉತ್ಸವ ನಡೆಯುತ್ತಿರುವುದರಿಂದ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಬಾರಿ ಉತ್ಸವವನ್ನು ಹಿಂದಿಗಿಂತಲೂ ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 22ರಂದು ಉತ್ಸವದ ಅಧಿಕೃತ ಉದ್ಘಾಟನೆ ಅದ್ದೂರಿಯಾಗಿ ನೆರವೇರಲಿದೆ. ಅಂದು ಸಂಜೆ ನಗರದ ಸುಭಾಷ್ ಸರ್ಕಲ್‌ನಿಂದ ಉತ್ಸವದ ಮುಖ್ಯ ವೇದಿಕೆಯವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ಆಯೋಜಿಸಲಾಗಿದೆ. ಜಿಲ್ಲೆ ಹಾಗೂ ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಡೊಳ್ಳು ಕುಣಿತ, ಯಕ್ಷಗಾನ ಸೇರಿದಂತೆ ಸುಮಾರು 14 ಪ್ರಖ್ಯಾತ ಕಲಾತಂಡಗಳು ಈ ಮೆರವಣಿಗೆಗೆ ಮೆರಗು ನೀಡಲಿವೆ. ಇದೇ ಸಮಯದಲ್ಲಿ, ಸಮುದ್ರದಲ್ಲಿ ಮೀನುಗಾರರಿಂದ ದೋಣಿಗಳಲ್ಲಿ ದೀಪಗಳ ಮೆರವಣಿಗೆ ಜರುಗಲಿದೆ ಎಂದರು.

ಪ್ರತಿದಿನ ಸಂಜೆ ದೇಶದ ಖ್ಯಾತನಾಮ ಕಲಾವಿದರಿಂದ ಸಂಗೀತ ರಸಸಂಜೆ ಏರ್ಪಡಿಸಲಾಗಿದೆ. ಡಿ.22ರಂದು ಉದ್ಘಾಟನಾ ಸಮಾರಂಭದ ನಂತರ ಪ್ರಖ್ಯಾತ ಗಾಯಕ ಹಾಗೂ ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಅವರಿಂದ ಸುಶ್ರಾವ್ಯ ಗಾಯನ, ಡಿ.23ರಂದು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದವರಿಂದ ಸಂಗೀತ ಸಂಜೆ, ಡಿ.24ರಂದು ಬಾಲಿವುಡ್‌ನ ಮೇರು ಗಾಯಕ ಸೋನು ನಿಗಮ್ ಅವರಿಂದ ಹಾಡುಗಳ ರಸದೌತಣ, ಡಿ.25ರಂದು ಯುವಜನತೆಯ ಕಣ್ಮಣಿ, ಪ್ರಸಿದ್ಧ ರ‍್ಯಾಪರ್ ರಫ್ತಾರ್ ಅವರಿಂದ ಪ್ರದರ್ಶನ. ಡಿ.26ರಂದು ಕನ್ನಡದ ಮಧುರ ಕಂಠದ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಗೀತೆಗಳ ಪ್ರಸ್ತುತಿ ಹಾಗೂ ಲಾವಣಿ ನೃತ್ಯ, ಡಿ.27ರಂದು ಇಂಡಿಯನ್ ಐಡಲ್ ಖ್ಯಾತಿಯ ಯುವ ಗಾಯಕ ಮೊಹಮ್ಮದ್ ದಾನಿಶ್ ಅವರಿಂದ ಮನರಂಜನೆ ಹಾಗೂ ಡಿ.28ರಂದು ಪಂಜಾಬಿ ಪಾಪ್ ಮತ್ತು ಬಾಲಿವುಡ್ ಹಾಡುಗಳ ಸರದಾರ ದಲೇರ್ ಮೆಹಂದಿ ಅವರಿಂದ ಸಮಾರೋಪ ಸಮಾರಂಭದಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಉತ್ಸವದ ಹಿನ್ನಲೆ ರಾಷ್ಟ್ರೀಯ ಕಲಾವಿದರ ಜೊತೆಗೆ, ಸ್ಥಳೀಯ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿದಿನ ಸಂಜೆ ಮುಖ್ಯ ಕಾರ್ಯಕ್ರಮಕ್ಕೂ ಮುನ್ನ 6ರಿಂದ 7 ಸ್ಥಳೀಯ ಕಲಾತಂಡಗಳಿಗೆ ವೇದಿಕೆ ಕಲ್ಪಿಸಲಾಗಿದೆ. ಅಲ್ಲದೇ ಸಾರ್ವಜನಿಕರು ಮತ್ತು ಪ್ರವಾಸಿಗರನ್ನು ಆಕರ್ಷಿಸಲು ವೈವಿಧ್ಯಮಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಕರಾವಳಿ ಉತ್ಸವಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹5 ಕೋಟಿ ರೂಪಾಯಿ ವಿಶೇಷ ಅನುದಾನ ಸರ್ಕಾರದಿಂದ ಘೋಷಿಸಲಾಗಿದ್ದು ಶೀಘ್ರದಲ್ಲೇ ಮಂಜೂರಾಗಲಿದೆ. ನಂತರ ಇವೆಂಟ್ ಮ್ಯಾನೇಜ್‌ಮೆಂಟ್ ತಂಡವನ್ನು ಗುರುತಿಸಿ ಕಾರ್ಯಕ್ರಮ ಜವಾಬ್ದಾರಿ ನೀಡಲಾಗುತ್ತದೆ. ಇದನ್ನು ಬಿಟ್ಟು ಜಿಲ್ಲೆ ಹಾಗೂ ರಾಜ್ಯದ ಬೇರೆ ಬೇರೆ ಉದ್ಯಮಗಳಿಂದ ಪ್ರಾಯೋಜಕತ್ವ ಕೋರಲಾಗಿದ್ದು, ಕೆಲವೊಂದು ಕಾರ್ಯಕ್ರಮಗಳಿಗೆ ನೇರವಾಗಿ ಸ್ಪಾನ್ಸರ್ ಮಾಡಲಿದ್ದಾರೆ. 8 ವರ್ಷಗಳ ಬಳಿಕ ಉತ್ಸವ ಆಯೋಜಿಸಲಾಗಿರುವುದರಿಂದ 7 ದಿನಗಳ ಕಾಲ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಎಲ್ಲರೂ ಸೇರಿ ಪ್ರಯತ್ನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಉತ್ಸವಕ್ಕೆ ಪೊಲೀಸ್ ಭದ್ರತೆ:

ಕರಾವಳಿ ಉತ್ಸವಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿರುವುದರಿಂದ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಬ್ಬರು ಡಿಎಸ್ಪಿ, 10 ಇನ್‌ಸ್ಪೆಕ್ಟರ್‌ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕೆಎಸ್ಆರ್‌ಪಿ ಮತ್ತು ಡಿಎಆರ್ ತುಕಡಿ ಭದ್ರತೆಗೆ ನಿಯೋಜಿಸಲಾಗಿದೆ. ಕಳ್ಳತನ ಮತ್ತು ಅಹಿತಕರ ಘಟನೆ ತಡೆಯಲು ಮಫ್ತಿ ಪೊಲೀಸರು ಹಾಗೂ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಣಾವಲು ಇರಲಿದೆ. ವಾಹನ ನಿಲುಗಡೆಗೆ ಫ್ಲೈ ಓವರ್ ಪಕ್ಕದಲ್ಲಿ ಹಾಗೂ ವೇದಿಕೆಯ ಹಿಂಭಾಗದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಉತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳು

ಡಿ.20ರಂದು ಪೇಂಟಿಂಗ್ ಸ್ಪರ್ಧೆ ನಡೆಯಿತು.

ಡಿ.23: ಛಾಯಾಗ್ರಹಣ ಮತ್ತು ರೀಲ್ಸ್ ಸ್ಪರ್ಧೆ.

ಡಿ.24: ರಂಗೋಲಿ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆ.

ಡಿ.25: ಗಾಳಿಪಟ ಉತ್ಸವ ಮತ್ತು ಮರಳು ಶಿಲ್ಪಕಲೆ ಪ್ರದರ್ಶನ.

ಡಿ.26: ಕರಾವಳಿ ಮ್ಯಾರಥಾನ್ (21ಕಿಮೀ, 10ಕಿಮೀ, ಮತ್ತು 5ಕಿಮೀ ವಿಭಾಗಗಳಲ್ಲಿ), ವಾಲಿಬಾಲ್, ಹಗ್ಗಜಗ್ಗಾಟ ಸ್ಪರ್ಧೆ ಮತ್ತು ಕವಿಗೋಷ್ಠಿ.

ಡಿ.27: ರಾಜ್ಯಮಟ್ಟದ ಶ್ವಾನ ಪ್ರದರ್ಶನ.

ಡಿ.28: ದೋಣಿ ಸ್ಪರ್ಧೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ