ರೋಣ ಪಟ್ಟಣದ ಸವಡಿ ರಸ್ತೆಯಲ್ಲಿ ಪ್ರಗತಿಪರ ರೈತ ಮಲ್ಲಯ್ಯ ಮಹಾಪುರುಷಮಠ ಅವರ ಜಮೀನಿನಲ್ಲಿ ಶನಿವಾರ ಜವಾರಿ ತಳಿಗಳ ಕ್ಷೇತ್ರೋತ್ಸವ, ಜವಾರಿಗಾಗಿ ಜಾಗ ಕಾರ್ಯಕ್ರಮ ನಡೆಯಿತು.
ರೋಣ: ರೈತರು ಆಧುನಿಕ ಕೃಷಿ ಜತೆಗೆ ಸಾಂಪ್ರದಾಯಿಕ ದೇಶಿಯ ಕೃಷಿ ಪದ್ಧತಿ ಉಳಿಸಿ, ಬೆಳೆಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸವಡಿ ರಸ್ತೆಯಲ್ಲಿ ಪ್ರಗತಿಪರ ರೈತ ಮಲ್ಲಯ್ಯ ಮಹಾಪುರುಷಮಠ ಇವರ ಜಮೀನಿನಲ್ಲಿ ಶನಿವಾರ ಜರುಗಿದ ಜವಾರಿ ತಳಿಗಳ ಕ್ಷೇತ್ರೋತ್ಸವ, ಜವಾರಿಗಾಗಿ ಜಾಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಹುತೇಕ ಜನರು ಕೃಷಿ ಮೇಲೆ ಅವಲಂಬಿತರಾಗಿದ್ದು, ನಮ್ಮ ಭಾಗದ ರೈತರಿಗೆ ಕೃಷಿಯೇ ಮೂಲ ಆಧಾರವಾಗಿದೆ. ರೈತರು ಆಧುನಿಕ ಕೃಷಿಯ ಜತೆ ಜತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಮೂಲ ಕೃಷಿ ಪದ್ಧತಿಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು. ಪ್ರಗತಿಪರ ರೈತ ಮಲ್ಲಯ್ಯ ಮಹಾಪುರುಷಮಠ ಮಾತನಾಡಿ, ಕುಲಾಂತರಿ ತಳಿ, ಅಧಿಕ ಲಾಭದಾಯಕ ಬೆಳೆ ಬೆನ್ನತ್ತಿದ ರೈತ ಸಮುದಾಯ ದೇಶಿಯ ತಳಿಗಳನ್ನು ಬಿತ್ತನೆ ಮಾಡುತ್ತಿಲ್ಲ. ಇದರಿಂದ ನಾವು ಬೆಳೆಯುವ ಬೆಳೆಯು ವಿಷಕಾರಿಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ರೈತರು ದೇಶಿಯ ತಳಿ ಬಿತ್ತನೆಗೆ ಮುಂದಾಗಬೇಕು. ಈಗಾಗಲೇ ನಮ್ಮ ಜಮೀನಿನಲ್ಲಿ ಕೆಂಜೋಳ, ಜವಾರಿ ಕಡಲೆ, ಜವಾರಿ ಗೋದಿಗಳನ್ನು ಬೆಳೆಯಲಾಗಿದ್ದು, ಮುಂದಿನ ಪೀಳಿಗೆಯ ರೈತರು ಜವಾರಿ ತಳಿಗಳನ್ನು ಬೆಳೆಯುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಬೆಳವಟಗಿಯ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ಸಿ.ಎಂ. ರಫಿ ಮಾತನಾಡಿ, ಕಡಲೆ ಬೆಳೆಗೆ ಸಿಡಿ ರೋಗ ಬರುವುದನ್ನು ತಡೆಯಲು ಯಾವುದೇ ಔಷಧಿ ಇಲ್ಲ. ಆದರೆ ಪ್ರತಿ ವರ್ಷ ಒಂದೇ ತರಹದ ಕಡಲೆ ತಳಿ ಬೆಳೆಯುವುದರಿಂದ ಬೆಳೆಗೆ ಸಿಡಿ ರೋಗ ಬರುತ್ತದೆ. ಆದ್ದರಿಂದ ಪ್ರತಿ ವರ್ಷಕ್ಕೊಮ್ಮೆ ಬೀಜ ತಳಿ ಬದಲಾವಣೆ ಮಾಡಬೇಕು. ಇದರಿಂದ ನೂರಕ್ಕೆ ನೂರಷ್ಟು ಸಿಡಿ ರೋಗ ತಡೆಯಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಧಾರವಾಡ ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ ಪ್ರಾಧ್ಯಾಪಕ ಡಾ. ಎಸ್.ಎಲ್. ಪಾಟೀಲ, ಬೆಳವಟಗಿಯ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ಸಿ.ಎಂ. ರಫಿ, ಗದಗ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರಜ್ಞೆ ಕಲಾವತಿ ಕಂಬಳಿ, ನಿವೃತ್ತ ತೋಟಗಾರಿಕೆ ಹಿರಿಯ ನಿರ್ದೇಶಕ ಸುರೇಶ ಕುಂಬಾರ, ಅಕ್ಷಯ ಪಾಟೀಲ, ಎಚ್.ಎಸ್. ಸೊಂಪುರ, ಸಿದ್ದಣ್ಣ ಬಂಡಿ, ಬಸವರಾಜ ನವಲಗುಂದ, ಕೃಷಿ ಸಹಾಯಕ ನಿರ್ದೇಶಕ ಎಂ.ಎಫ್. ತಹಶೀಲ್ದಾರ, ಕೃಷಿ ಅಧಿಕಾರಿ ಶಿವಪುತ್ರಪ್ಪ ದೊಡ್ಡಮನಿ, ಎಚ್.ಎಸ್. ಸೋಂಪುರ, ಪರತಗೌಡ್ರ ರಾಯನಗೌಡ್ರ, ಅಯ್ಯಪ್ಪ ಕಿರೆಸೂರ, ಬಸವಣ್ಣೆಪ್ಪ ದೊಡ್ಡಣ್ಣವರ, ದೊಡ್ಡಬಸಪ್ಪ ನವಲಗುಂದಿ, ಮಹಾದೇವಪ್ಪ ಅಬ್ಬಿಗೇರಿ, ಮುತ್ತಣ್ಣ ಕಳಸಣ್ಣವರ, ಮುತ್ತಪ್ಪ ಆದಿ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.