
ಕಾರವಾರ-ಕೈಗಾ ರಸ್ತೆ ದುರಸ್ತಿಗೆ ₹20 ಕೋಟಿ ಅನುದಾನ
ನಗರದ ಹಬ್ಬುವಾಡದಿಂದ ಕೈಗಾದವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ಸರ್ಕಾರದಿಂದ ಮಂಜೂರಾಗಿರುವ ₹20 ಕೋಟಿ ಅನುದಾನವನ್ನು ಬಳಸಿಕೊಂಡು ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಕಾರವಾರ ತಾಲೂಕಿನ ಗ್ರಾಮಸ್ಥರು ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಾರವಾರದಿಂದ ಶೇಜೇಶ್ವರ ದೇವಾಲಯ, ಶಿರವಾಡ ರೈಲ್ವೆ ನಿಲ್ದಾಣ ಮತ್ತು ಕಡವಾಡ ಗ್ರಾಮದ ಮೂಲಕ ಕೈಗಾದವರೆಗೆ ಹೋಗುವ ರಸ್ತೆಯ ಅಭಿವೃದ್ಧಿಗಾಗಿ ತಾವು ಈಗಾಗಲೇ ಶ್ರಮವಹಿಸಿ ಸರ್ಕಾರದಿಂದ ₹20 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಮಳೆಗಾಲದ ಕಾರಣ ಕಾಮಗಾರಿ ವಿಳಂಬವಾಗಿರುವುದು ತಿಳಿದಿದೆ. ಆದರೆ, ಪ್ರಸ್ತುತ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ಇನ್ನು ಕೈಗಾ ಅಣುಸ್ಥಾವರಕ್ಕೆ ಸಂಬಂಧಿಸಿದ ಭಾರಿ ತೂಕದ ವಾಹನಗಳ ಸಂಚಾರದಿಂದಾಗಿ ರಸ್ತೆ ಪದೇ ಪದೇ ಹಾಳಾಗುತ್ತಿದೆ. ಹೀಗಾಗಿ ಕೈಗಾದವರೇ ರಸ್ತೆ ನಿರ್ಮಿಸಲಿ ಎಂಬ ಶಾಸಕರ ನಿಲುವನ್ನು ಉಲ್ಲೇಖಿಸಿರುವ ಗ್ರಾಮಸ್ಥರು, ಕೈಗಾದವರು ರಸ್ತೆ ನಿರ್ಮಿಸುವವರೆಗೆ ಕಾಯುವುದು ಬೇಡ. ಬದಲಿಗೆ, ಈಗಾಗಲೇ ಮಂಜೂರಾಗಿರುವ ಸರ್ಕಾರಿ ಅನುದಾನದಲ್ಲೇ ರಸ್ತೆ ಕಾಮಗಾರಿ ಆರಂಭಿಸಿ. ಅದೇ ಸಮಯದಲ್ಲಿ, ರಸ್ತೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಹೊತ್ತು ಬರುವ ಕೈಗಾ ಯೋಜನೆಯ ವಾಹನಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ಎಂದು ವಿನಂತಿಸಿದ್ದಾರೆ.
ಮನವಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಶಾಸಕ ಸತೀಶ್ ಸೈಲ್, ರಸ್ತೆ ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆಗಳು ಈಗ ನಿವಾರಣೆಯಾಗಿವೆ ಎಂದು ಸ್ಪಷ್ಟಪಡಿಸಿದರು.ಮಲ್ಲಾಪುರ ಭಾಗದಲ್ಲಿ ಕಂಪನಿ ವಾಹನಗಳಿಂದ ರಸ್ತೆ ಹಾಳಾಗಿದ್ದು, ಅಲ್ಲಿಯೂ ವ್ಯವಸ್ಥಿತ ರಸ್ತೆ ನಿರ್ಮಿಸಲಾಗುವುದು ಎಂದರು.