ಹೂವಿನಹಡಗಲಿ: ದೇಗುಲದ ಧರ್ಮದರ್ಶಿಯಿಂದ ಕಿರುಕುಳ ತಡೆಗಟ್ಟುವ ಜತೆಗೆ, ಕುಂದು ಕೊರತೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯ ಮಾಡುವ 12 ಜನ ಬಾಬುದಾರರು ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುವ ಗೊರವಯ್ಯ, ಸಾಮೂಹಿಕವಾಗಿ ಸರಪಳಿ ಪವಾಡ ಮಾಡುವವರು, ಶಸ್ತ್ರ ಪವಾಡ ಮಾಡುವವರು, ಬೆಳ್ಳಿ ಬೆತ್ತ ಹಿಡಿಯುವವರು, ನಡುಗೂಟ ಬಾಬುದಾರರು, ದಿವಟಿಕೆ ಸೇವೆ ಮತ್ತು ಇತರೆ ದೇವರ ಕೆಲಸ ಮಾಡುವವರು, ಅಪ್ತಗಿರಿ ಹಿಡಿಯುವ ಬಾಬುದಾರರು, ನಪೋರಿ ಊದುವವರು, ಹಳದಿ, ಕೆಂಪು, ನಿಶಾನೆ ಹಿಡಿಯುವವರು, ಕೋರಿ ನಿಶಾನೆ ಹಿಡಿಯುವವರು, ಛತ್ರಿ ಹಿಡಿಯುವವರು, ಜಜ್ಜೂರಿ ಕಾಯಿ ಹಿಡಿಯುವವರು ಬಾಬುದಾರಾರರಾಗಿದ್ದೇವೆ. ಪ್ರತಿ ಹುಣ್ಣಿಮೆ, ಅಮವಾಸ್ಯೆ, ಹಬ್ಬ, ನವರಾತ್ರಿ, ರಥೋತ್ಸವ, ಜಾತ್ರೆ ಮತ್ತು ಭಾನುವಾರ ಸೇರಿದಂತೆ ದೇಗುಲದಲ್ಲಿ ನಡೆಯುವ ಧಾರ್ಮಿಕ ಕಾರ್ಯ ಮಾಡುತ್ತೇವೆ, ಈ ಕುರಿತು ನಮಗೆ ಸರ್ಕಾರ ಆದೇಶ ಪತ್ರ ನೀಡಿದೆ. ಆದರೆ, ಧರ್ಮದರ್ಶಿ ನಮ್ಮ ಕಾಯಕಕ್ಕೆ ಅಡ್ಡಿಪಡಿಸುತ್ತ, ದೇವರಿಗೆ ಹಿಡಿಯುವ ಛತ್ರಿಯನ್ನು ತಮಗೆ ಹಿಡಿಯಲು ಸೂಚಿಸುತ್ತಾರೆ. ಇಲ್ಲಿ ದೇವರ ಪೂಜೆಗಿಂತ ವ್ಯಕ್ತಿ ಪೂಜೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಈ ದೇಗುಲದ ರೂಢಿ ಸಂಪ್ರದಾಯ, ಪರಂಪರೆ ಉಲ್ಲಂಘನೆ ಮಾಡಿದ್ದರೂ, ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದೇವೆ. ದೇವಸ್ಥಾನಕ್ಕೆ ಧರ್ಮದರ್ಶಿಯೇ ಮುಖ್ಯವಾಗಿದ್ದರೆ ನಾವು ಬಹಿಷ್ಕಾರ ಹಾಕುತ್ತೇವೆ. ಎಲ್ಲ ಧಾರ್ಮಿಕ ಕಾರ್ಯ ಅವರೇ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ ಅವರು, ದೇಗುಲ 12 ಜನ ಬಾಬುದಾರರಿಗೆ ಪ್ರತಿ ವರ್ಷ ಸರ್ಕಾರ ₹1.70 ಲಕ್ಷ ವಾರ್ಷಿಕ ಸಂಭಾವನೆ ನೀಡಬೇಕು ಎಂದು ಒತ್ತಾಯಿಸಿದರು.ದೇಗುಲದ ಪ್ರಧಾನ ಅರ್ಚಕ ಪ್ರಮೋದ್ ಭಟ್ಟ ಮಾತನಾಡಿ, ಸರ್ಕಾರ ಮೈಲಾರಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ಎಂದು ನೇಮಿಸಿದೆ. ಅತ್ತ ದೇಗುಲದ ಅಧಿಕಾರಿ ಇತ್ತ ಧರ್ಮದರ್ಶಿ ಮಧ್ಯೆ ಇಕ್ಕಟ್ಟಿನಲ್ಲಿ ದೇವರ ಕಾಯಕ ಮಾಡಬೇಕಿದೆ. ಪದೇ ಪದೇ ಧರ್ಮದರ್ಶಿ ದೇಗುಲದ ಒಳಗೆ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ, ತಾವೇ ಪ್ರಧಾನ ಅರ್ಚಕರು, ಅಭಿಷೇಕ ಮಾಡಿ ತಾವೇ ಅದರ ಬಾಬ್ತು ಪಡೆಯುತ್ತಾರೆ. ನೀವು ನಾನು ಹೇಳಿದಂತೆ ಕೇಳಬೇಕೆಂದು ಉದ್ಘಟತನ ತೋರಿದ್ದಾರೆ ಎಂದು ದೂರಿದರು.
ಸರ್ಕಾರದ ಆದೇಶ ಉಲ್ಲಂಘನೆ ಆದರೂ ಕ್ರಮಕ್ಕೆ ಮುಂದಾಗಿಲ್ಲ. 2026ರಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯು ಮಾರ್ಚ್-1ರಂದು ಎಂದು ಭಕ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ, ಆದರೆ, ಜಾತ್ರೆ ಫೆಬ್ರವರಿಯಲ್ಲಿದೆ. ಈ ಕುರಿತು ಡಿಸಿಗೆ ದೂರು ನೀಡಿದ್ದೇವೆ ಎಂದರು.ಗರ್ಭ ಗುಡಿಯಲ್ಲಿ ಅರ್ಚಕರನ್ನು ಹೊರತು ಪಡಿಸಿ ಯಾರಿಗೂ ಪ್ರವೇಶವಿಲ್ಲ. ಆದರೆ, ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರ ಸಂಬಂಧಿಗಳು ದೇಗುಲದ ಒಳಗೆ ಬಂದು ಭಕ್ತರಿಗೆ ಮಂಗಳಾರತಿ ಮಾಡಿ ತಟ್ಟೆ ಕಾಸು ಪಡೆಯುತ್ತಾರೆ. ಧರ್ಮದರ್ಶಿ ಗರ್ಭಗುಡಿಯಲ್ಲಿ ಸಾಲಿಗ್ರಾಮ ಪೂಜೆ ಮಾಡಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ಈ ರೀತಿಯ ವಾತಾವರಣದಿಂದ ಧಾರ್ಮಿಕ ಭಾವನೆಗೆ ಧಕ್ಕೆ ಬರುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.ಕಾರ್ಣಿಕ ನುಡಿಯಲ್ಲ
ಜಾತ್ರೆಯಲ್ಲಿ ಕಾರ್ಣಿಕ ನುಡಿವ ಗೊರವಯ್ಯ 11 ದಿನ ಉಪವಾಸ ವ್ರತ ಮಾಡುತ್ತಾರೆ. ಧರ್ಮದರ್ಶಿಯೂ ಮಾಡುತ್ತಾರೆ ಎಂದು ಭಕ್ತರಿಗೆ ಸುಳ್ಳು ಹೇಳುತ್ತಾರೆ. ಕಾರ್ಣಿಕ ನುಡಿ ವಿಶ್ಲೇಷಣೆ ಮಾಡುತ್ತಾರೆ, ಇಲ್ಲ ಸಲ್ಲದ ಹೇಳಿಕೆ ನೀಡಿ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಾರೆ. ಬೇರೆ ಮೈಲಾರಲಿಂಗೇಶ್ವರ ದೇಗುಲಕ್ಕೆ ಹೋಗಿ ಇವರ ನೇತೃತ್ವದಲ್ಲಿ ನಡೆಯಬೇಕೆಂಬ ಆಸೆ ಹೊಂದಿರುವ ಧರ್ಮದರ್ಶಿ ತಮ್ಮ ಧಾರ್ಮಿಕ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಿದ್ದಾರೆ. ಪರಿಸ್ಥಿತಿ ಇದೇರೀತಿ ಮುಂದುವರೆದರೆ ನಮ್ಮ ತಂದೆ ರಾಮಣ್ಣ ಈ ಬಾರಿ ಕಾರ್ಣಿಕ ಬಿಲ್ಲು ಏರಿ ಕಾರ್ಣಿಕ ನುಡಿಯುವುದಿಲ್ಲ ಎಂದು ರಾಮಣ್ಣನ ಪುತ್ರ ಕೋಟೆಪ್ಪ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ದೇಗುಲದ ಬಾಬುದಾರರು ಉಪಸ್ಥಿತರಿದ್ದರು.