ಚನ್ನಗಿರಿ ಪಟ್ಟಣದ ಊರಬಾಗಿಲ ಶ್ರೀ ಹನುಮಂತ ದೇವಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ವಿರಾಟ್ ಹಿಂದೂ ಮಹಾಗಣಪತಿಯನ್ನು ಗುರುವಾರ ಪಟ್ಟಣದ ವಿವಿಧ ರಾಜಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ರಾತ್ರಿ ಪಟ್ಟಣದ ಗಣಪತಿ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಊರಬಾಗಿಲ ಶ್ರೀ ಹನುಮಂತ ದೇವಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ವಿರಾಟ್ ಹಿಂದೂ ಮಹಾಗಣಪತಿಯನ್ನು ಗುರುವಾರ ಪಟ್ಟಣದ ವಿವಿಧ ರಾಜಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ರಾತ್ರಿ ಪಟ್ಟಣದ ಗಣಪತಿ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.
ಮಧ್ಯಾಹ್ನ 1 ಗಂಟೆಗೆ ಗಣಪತಿ ಮಂಟಪದಿಂದ ಗಣೇಶ ಮೂರ್ತಿಯನ್ನು ಅಲಂಕೃತಗೊಂಡ ವಾಹನದಲ್ಲಿ ಪ್ರತಿಷ್ಠಾಪಿಸಲಾಯಿತು. ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಹಾಲಸ್ವಾಮಿ ವಿರಕ್ತ ಮಠದ ಬಸವ ಜಯಚಂದ್ರ ಮಹಾಸ್ವಾಮಿಗಳು ವಾಹನ ಚಲಾಯಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಗಣಪತಿ ಮೂರ್ತಿಯನ್ನು ಹೊತ್ತ ವಾಹನಕ್ಕೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್, ತುಮ್ ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಪೂಜೆ ಸಲ್ಲಿಸಿದರು. ಶೋಭಾಯಾತ್ರೆ ಪ್ರಾರಂಭಕ್ಕೂ ಮುನ್ನ ಗಣಪತಿ ಮಂಟಪಕ್ಕೆ ಚಿತ್ರದುರ್ಗದ ಮಾದಾರ ಚನ್ನಯ್ಯ ಮಹಾಸ್ವಾಮಿಗಳು ಭೇಟಿ ನೀಡಿ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು, ಮಹಿಳೆಯರು, ಯುವತಿಯರು ಡಿ.ಜೆ. ಸದ್ದಿಗೆ ಭರ್ಜರಿಯಾಗಿ ನರ್ತನ ಮಾಡುತ್ತ ಎಲ್ಲರ ಗಮನ ಸೆಳೆದರು. ಜಾನಪದ ಕಲಾತಂಡಗಳಾದ ಚಂಡೆ ಮದ್ದಳೆ, ನಾಸಿಕ್ ಡೋಲ್, ತಮಟೆ, ವೀರಗಾಸೆ ಸೇರಿದಂತೆ ಮುಂತಾದ ಕಲಾತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು. ಶ್ರೀ ಆಂಜನೇಯ, ಶ್ರೀರಾಮ, ದುರ್ಗಾದೇವಿಯ ಮೂರ್ತಿಗಳು ಸಹ ಮೆರವಣಿಗೆಗೆ ಕಳೆನೀಡಿದ್ದವು.
ವಿರಾಟ್ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆ ಪಟ್ಟಣದ ವಿವಿಧ ಸಂಘ- ಸಂಸ್ಥೆಗಳವರು ಶೋಭಾಯಾತ್ರೆಗೆ ಬಂದಿದ್ದ ಭಕ್ತರಿಗೆ ಬೆಳಗ್ಗೆಯಿಂದಲೇ ಉಪಾಹಾರ, ನೀರು, ಪಾನಕ, ಮಜ್ಜಿಗೆಯನ್ನು ವಿತರಣೆ ಮಾಡಿದರು. ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಮೆರವಣಿಗೆಗೆ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ವಾತಂತ್ರ ಹೋರಾಟಗಾರರ, ದಾರ್ಶನಿಕರು ಮತ್ತು ಉಗ್ರ ನರಸಿಂಹಸ್ವಾಮಿ, ಭೂ ವರಹಾ ಸ್ವಾಮಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದು, ಪ್ರತಿಮೆಗಳ ಬಳಿ ಜನರು ಸೆಲ್ಫಿಗಳ ಕ್ಲಿಕಿಸಿಕೊಂಡು ಸಂಭ್ರಮಿಸಿದರು.
- - -
-8ಕೆಸಿಎನ್ಜಿ1: ಗಣಪತಿ ಮೂರ್ತಿಯ ಮೆರವಣಿಗೆಗೆ ಹಿರೇಮಠ ಮತ್ತು ಹಾಲಸ್ವಾಮಿ ವಿರಕ್ತ ಮಠಗಳ ಶ್ರೀಗಳು ಚಾಲನೆ ನೀಡಿದರು.
-8ಕೆಸಿಎನ್ಜಿ2: ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್, ಎಚ್.ಎಸ್.ಶಿವಕುಮಾರ್ ಗಣಪತಿ ಹೊತ್ತ ವಾಹನಕ್ಕೆ ಪೂಜೆ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.