ದಸರಾ ಹಬ್ಬದಂಗವಾಗಿ ಧಾರವಾಡದಲ್ಲಿ 22ನೇ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ದೊರೆಯಿತು.
ಧಾರವಾಡ:
ದಸರಾ ಹಬ್ಬದಂಗವಾಗಿ ನಗರದಲ್ಲಿ 22ನೇ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ದೊರೆಯಿತು. ಮಧ್ಯಾಹ್ನ 1.15ಕ್ಕೆ ಬಂಡೆಮ್ಮ ದೇವಸ್ಥಾನದಲ್ಲಿ ಬಂಡೆಮ್ಮ ದೇವಿ ಹಾಗೂ ಅಂಬಾರಿಗೆ ಪೂಜೆ ಸಲ್ಲಿಸುವ ಮೂಲಕ ಕೋಡಿಮಠದ ಶಿವಾನಂದ ಶಿವಯೋಗಿ ರಾಜಯೋಗೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಜಂಬೂ ಸವಾರಿಯೊಂದಿಗೆ ಈ ಸಲದ ಶರನ್ನವರಾತ್ರಿ ಉತ್ಸವವು ಸಂಪನ್ನಗೊಂಡಿತು.
ಜಂಬೂ ಸವಾರಿಗೆ ಚಾಲನೆ ನೀಡಿದ ಕೋಡಿಮಠದ ಶ್ರೀಗಳು, ನಾಡಿನ ಜನರಿಗೆ ಒಳ್ಳೆಯ ಮಳೆ ಹಾಗೂ ಬೆಳೆ ಸಮೃದ್ಧಿಯಾಗಲಿ ಎಂದು ಹರಿಸಿದರು.
ಬಂಡೆಮ್ಮ ದೇವಸ್ಥಾನದಿಂದ ಶುರುವಾರದ ಜಂಬೂ ಸವಾರಿಯೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಂಬಾರಿ ಹೊತ್ತ ರೂಪವತಿ ಎಂಬ ಆನೆಯೂ ಈಶ್ವರ ದೇವಸ್ಥಾನದ ವೇದಿಕೆ ಕಡೆಗೆ ಅತ್ಯಂತ ಗಾಂಭೀರ್ಯದಿಂದ ಸಾಗಿತು. ಸುಮಾರು 22ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಕರಡಿಮಜಲು, ಡೊಳ್ಳು, ಜಾಂಜ್, ಜಗ್ಗಲಿಗೆ ಹಾಗೂ 500ಕ್ಕೂ ಹೆಚ್ಚು ಜನರ ಭಜನಾ ತಂಡಗಳು ಮತ್ತು 108 ಜನ ಮಹಿಳೆಯರ ಕುಂಭ ಮೆರವಣಿಗೆಯೊಂದಿಗೆ ಹೊಸಯಲ್ಲಾಪುರ, ಸುಭಾಷ್ ರಸ್ತೆಯ ಮೂಲಕ ಕಡಪಾ ಮೈದಾನವನ್ನು ತಲುಪಬೇಕಿತ್ತು. ಆದರೆ, ಕಡಪಾ ಮೈದಾನಕ್ಕೆ ಕೀಲಿ ಹಾಕಿದ್ದರಿಂದ ಮಹಾನಗರ ಪಾಲಿಕೆಯ ಆವರಣದೊಳಗೆ ಸಾಗಿಹೋಗಿ ಮುಕ್ತಾಯಗೊಂಡಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ.ಎಂ. ವೆಂಕಟೇಶಕುಮಾರ್ ಅವರು ಮಾತನಾಡಿ, ನಾನೊಬ್ಬ ಸಂಗೀತಗಾರ; ದೇವಿಯ ಭಕ್ತ. ನನಗೆ ಮಾತನಾಡಲು ಬರುವುದಿಲ್ಲ, ಹಾಡಲು ಬರುತ್ತದೆ ಎಂದು ಹೇಳಿ, ಹಾಡಿನ ಮೂಲಕ ಸಮಾರಂಭ ಉದ್ಘಾಟಿಸಿದರು.ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ದಸರಾ ಜಂಬೂ ಸವಾರಿ ಉತ್ಸವ ಆಯೋಜಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಿಂದೆ ಮೈಸೂರಿನಲ್ಲಿ ಮಹಾರಾಜರು ದಸರಾ ಉತ್ಸವ ಆಚರಿಸುತ್ತಿದ್ದರು. ಇಂದು ಮೈಸೂರು ದಸರಾ ಹಬ್ಬವನ್ನು ಸರ್ಕಾರವೇ ಆಯೋಜಿಸುತ್ತದೆ. ಆದರೆ, ಉತ್ತರ ಕರ್ನಾಟಕದ ಧಾರವಾಡದಲ್ಲಿ ಕಳೆದ 22 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಪ್ರಾಸ್ತಾವಿಕ ಮಾತನಾಡಿದರು. ಆರ್ಎಸ್ಎಸ್ ಪ್ರಾಂತ ಪ್ರಚಾರಕ ಶ್ರೀಧರ ನಾಡಿಗೇರ ಮಾತನಾಡಿದರು. ಶಿರಹಟ್ಟಿಯ ಜಗದ್ಗುರು ಶ್ರೀಫಕೀರ ದಿಂಗಾಲೇಶ್ವರ ಶ್ರೀ, ಹಾನಗಲ್ ಬಮ್ಮನಹಳ್ಳಿ ಮಠದ ಶಿವಯೋಗಿ ಸ್ವಾಮೀಜಿ, ಹುನಗುಂದ ಮಠದ ವೀರೇಶ್ವರ ಶಿವಾಚಾರ್ಯರು, ಮಕ್ಕಳ ವೈದ್ಯ ಡಾ. ರಾಜನ್ ದೇಶಪಾಂಡೆ, ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ, ವೈದ್ಯರಾದ ಡಾ. ಎಸ್.ಆರ್. ರಾಮನಗೌಡರ್, ಸಮಾಜಸೇವಕರಾದ ಮಹೇಂದ್ರ ಸಿಂಘಿ, ದಸರಾ ಸಮಿತಿಯ ಕಾರ್ಯದರ್ಶಿ ನಾರಾಯಣ ಕೊಪರ್ಡೆ, ಕಾರ್ಯದರ್ಶಿ ಪಾಂಡುರಂಗ ಕಿರೇಸೂರ, ಯಶವಂತರಾವ್ ಕದಂ, ಹನಮೇಶ ಶರಾಫ್, ವಿಲಾಸ್ ಟಿಬೇಲಿ ಹಾಗೂ ಸುಭಾಷ್ ಮೂರೆ ಉಪಸ್ಥಿತರಿದ್ದರು. ಮನೋಜ್ ಸಂಗೊಳ್ಳಿ ಸ್ವಾಗತಿಸಿದರು. ಮಂಜುಳಾ ಮುಂಜಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.