ನವೆಂಬರ್ 20ರಂದು ಸಂಜೆ 6.30ಕ್ಕೆ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ನವೆಂಬರ್ 21, 22 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕ ಫೈರ್ ವರ್ಕ್ಸ್, ಹಗ್ಗೇರಿ ತಯಾರಕರ ವತಿಯಿಂದ ವಿಶೇಷ ಪಟಾಕಿ ಪ್ರದರ್ಶನ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಲಿದೆ. ಎರಡು ಡಿಜೆ ತಂಡಗಳ ಸಂಗೀತದ ಅಬ್ಬರ ಯುವಕರನ್ನು ಸೇರಿದಂತೆ ಸಾರ್ವಜನಿಕರನ್ನು ಸಂಭ್ರಮದಲ್ಲಿ ತೇಲಿಸುತ್ತಿದೆ. ನವೆಂಬರ್ 22ರ ಭಾನುವಾರ ಸಂಜೆ 7 ಗಂಟೆಗೆ ಅರಸೀಕೆರೆಯ ಪ್ರಮುಖ ಬೀದಿಗಳಲ್ಲಿ ಅದ್ದೂರಿ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ವಿವಿಧ ಕಲಾತಂಡಗಳು ಹಾಗೂ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ಶ್ರೀ ಪ್ರಸನ್ನ ಗಣಪತಿಯ ವಿಸರ್ಜನೆ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಧಾರ್ಮಿಕ ಪರಂಪರೆ, ಭಕ್ತಿ ಮತ್ತು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿರುವ ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ಮಹೋತ್ಸವಕ್ಕೆ ಈ ಬಾರಿ 85ನೇ ವರ್ಷದ ಸಂಭ್ರಮ. ನಗರದ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಅದ್ದೂರಿ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಚಾಲನೆ ನೀಡಿದರು.ನವೆಂಬರ್ 20ರಿಂದ ಆರಂಭಗೊಂಡಿರುವ ಉತ್ಸವ ನವೆಂಬರ್ 22ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನವೆಂಬರ್ 20ರಂದು ಸಂಜೆ 6.30ಕ್ಕೆ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ನವೆಂಬರ್ 21, 22 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕ ಫೈರ್ ವರ್ಕ್ಸ್, ಹಗ್ಗೇರಿ ತಯಾರಕರ ವತಿಯಿಂದ ವಿಶೇಷ ಪಟಾಕಿ ಪ್ರದರ್ಶನ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಲಿದೆ. ಎರಡು ಡಿಜೆ ತಂಡಗಳ ಸಂಗೀತದ ಅಬ್ಬರ ಯುವಕರನ್ನು ಸೇರಿದಂತೆ ಸಾರ್ವಜನಿಕರನ್ನು ಸಂಭ್ರಮದಲ್ಲಿ ತೇಲಿಸುತ್ತಿದೆ. ನವೆಂಬರ್ 22ರ ಭಾನುವಾರ ಸಂಜೆ 7 ಗಂಟೆಗೆ ಅರಸೀಕೆರೆಯ ಪ್ರಮುಖ ಬೀದಿಗಳಲ್ಲಿ ಅದ್ದೂರಿ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ವಿವಿಧ ಕಲಾತಂಡಗಳು ಹಾಗೂ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ಶ್ರೀ ಪ್ರಸನ್ನ ಗಣಪತಿಯ ವಿಸರ್ಜನೆ ನೆರವೇರಲಿದೆ. ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು, 85ನೇ ವರ್ಷದ ಈ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ಪಾಲ್ಗೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎನ್. ಸಮಿವುಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ನಾಗರಾಜ್, ಹರೀಶ್ ಮೇಸ್ತ್ರಿ, ವೆಂಕಟಮಣಿ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸೈಯದ್ ಸಿಕಂದರ್ ಸೇರಿದಂತೆ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು. 85 ವರ್ಷಗಳ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಶ್ರೀ ಪ್ರಸನ್ನ ಗಣಪತಿ ಮಹೋತ್ಸವಕ್ಕೆ ಅರಸೀಕೆರೆ ನಗರ ಸಜ್ಜಾಗಿದ್ದು, ಮೂರು ದಿನಗಳ ಉತ್ಸವ ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.