ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವ । ಜನಮನ ಸೆಳೆದ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಡೋಲು ಕುಣಿತ
ಐತಿಹಾಸಿಕ ಪ್ರಸಿದ್ಧ ಸಿದ್ದಗಂಗೆಯಲ್ಲಿ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಶ್ರೀಕ್ಷೇತ್ರ ಸಿದ್ದಗಂಗೆಯ ಆರಾಧ್ಯದೈವ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಬೆಳಿಗ್ಗೆ 11.50ಕ್ಕೆ ಸರಿಯಾಗಿ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.ರಥೋತ್ಸವದಲ್ಲಿ ಶ್ರೀ ಕ್ಷೇತ್ರದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ತಹಸೀಲ್ದಾರ್ ಸಿದ್ದೇಶ್, ವಿವಿಧ ಮಠಾಧೀಶರು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಪಾಲ್ಗೊಂಡು ರಥವನ್ನು ಮುಂದಕ್ಕೆ ಎಳೆದು ಭಕ್ತಿ ಸಮರ್ಪಿಸಿದರು.
ರಥವನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.
ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೇ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಶ್ರೀಕ್ಷೇತ್ರದಲ್ಲಿಂದು ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಕ್ತಾದಿಗಳು ಶ್ರೀಮಠದ ಶಾಲಾ ಕಟ್ಟಡಗಳ ಮೇಲೆ ಹತ್ತಿ ರಥೋತ್ಸವವನ್ನು ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.