ಭದ್ರಾವತಿ: ತಾಲೂಕಿನ ಮಾವಿನಕೆರೆ ಸಂತ ಕಿರಿಯ ಪುಷ್ಪ ತೆರೇಸಾ ದೇವಾಲಯ ವತಿಯಿಂದ ಶನಿವಾರ ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ 10 ಗಂಟೆಗೆ ಜೀವಂತ ಶಿಲುಬೆ ಹಾದಿಯ ಮೂಲಕ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಐತಿಹಾಸಿಕ ದೃಶ್ಯವನ್ನು ಮರುಸೃಷ್ಟಿಸುವ ಮೂಲಕ ಧಾರ್ಮಿಕತೆ ಮಹತ್ವ ಭಕ್ತರಿಗೆ ತಿಳಿಸಲಾಯಿತು.
ಏಸುಕ್ರಿಸ್ತರನ್ನು ಶಿಲುಬೆಗೇರಿಸುವ ಮೊದಲು ಮತ್ತು ಗೋಲ್ಲುತ್ತಾ ಬೆಟ್ಟವನ್ನು ಪ್ರವೇಶಿಸುವ ಮೊದಲು ಹಾದಿ ಬೀದಿಗಳಲ್ಲಿ ಚಿತ್ರಹಿಂಸೆ ನೀಡುತ್ತಾ ಎಳೆದಾಡುವ ದೃಶ್ಯವನ್ನು ಮಾವಿನಕೆರೆಯ ಹಾದಿ ಬೀದಿಗಳಲ್ಲಿ ಪಾತ್ರಧಾರಿಗಳಿಂದ ಮರುಸೃಷ್ಟಿ ಮಾಡಲಾಯಿತು.ಪಯಣದ ಉದ್ದಕ್ಕೂ ರಸ್ತೆ ಅಕ್ಕಪಕ್ಕದಲ್ಲಿ ಏಸುಕ್ರಿಸ್ತರಿಗೆ ನೀಡಿದ ಚಿತ್ರಹಿಂಸೆ, ನೆನಪಿಸುವ ವಿವಿಧ ದೃಶ್ಯಗಳ ಪ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಅನಂತರ 14 ಸ್ಥಳದ ಶಿಲುಬೆ ಹಾದಿ, ಪೂಜಾ ವಿಧಿವಿಧಾನ ಮತ್ತು ಶಿಲುಬೆಗೆ ಗೌರವ ಸನ್ಮಾನ ಮಾವಿನಕೆರೆಯ ಬೆಟ್ಟದ ಮೇಲೆ ನೆರವೇರಿಸಲಾಯಿತು.
ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ಅವರಿಂದ ಐತಿಹಾಸಿಕ ದೃಶ್ಯದ ಮರುಸೃಷ್ಟಿ ಮಾಡಿದ ಪಾತ್ರಧಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ, ಮಜ್ಜಿಗೆ ಮತ್ತು ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿತ್ತು.ಶಿವಮೊಗ್ಗ ಧರ್ಮ ಪ್ರಾಂತ್ಯಾಧಿಕಾರಿ ಫಾದರ್ ಸ್ಪ್ಯಾನಿ ಡಿಸೋಜಾ, ಧರ್ಮ ಕೇಂದ್ರದ ಗುರುಗಳಾದ ಫಾದರ್ ವಿನ್ಸೆಂಟ್ ಸೆರಾವೋ, ಕಾರೇಹಳ್ಳಿ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ, ಹಿರಿಯೂರು ಧರ್ಮ ಕೇಂದ್ರದ ಗುರುಗಳಾದ ಫಾದರ್ ರಿಚರ್ಡ್ ಮಸ್ಕರೇನಸ್, ಸಂತೋಷ್ ಫೆರೇರಾ, ಶಿವಮೊಗ್ಗ ಮಲ್ಲಿಗೆ ಮನೆ ಕೇಂದ್ರದ ಗುರುಗಳಾದ ರೊನಾಲ್ಡ್ ಡಿಕೋನ, ಚನ್ನಗಿರಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಜಾರ್ಜ್ ವಿನ್ಸೆಂಟ್ ಲೋಬೊ, ನ್ಯೂಟೌನ್ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜಾ, ಧರ್ಮ ಭಗಿನಿಯರು ಮತ್ತು ಧರ್ಮ ಕೇಂದ್ರದ ಹಾಗೂ ನೆರೆಯ ಧರ್ಮ ಕೇಂದ್ರದ ಭಕ್ತಾದಿಗಳು ಪಾಲ್ಗೊಂಡಿದ್ದರು.
- - - -D9-BDVT5:ಭದ್ರಾವತಿ ತಾಲೂಕಿನ ಮಾವಿನಕೆರೆ ಸಂತ ಕಿರಿಯ ಪುಷ್ಪ ತೆರೇಸಾ ದೇವಾಲಯದ ವತಿಯಿಂದ ಶನಿವಾರ ಐತಿಹಾಸಿಕ ಮಾವಿನಕೆರೆ ಶಿಲುಬೆ ಬೆಟ್ಟದ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.