ಗ್ರಾಮ ದೇವತೆ ಜಾತ್ರೆಗೆ ಅದ್ಧೂರಿ ತೆರೆ

KannadaprabhaNewsNetwork |  
Published : Jun 05, 2025, 01:35 AM ISTUpdated : Jun 05, 2025, 01:36 AM IST
ಜಾತ್ರೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಟ್ಟಣದ ಗ್ರಾಮ ದೇವತೆ ಜಾತ್ರೆ ಕಳೆದ ಐದು ದಿನಗಳಿಂದ ಬಹಳ ಸಡಗರ, ಸಂಭ್ರಮದಿಂದ ಜರುಗಿತು. ಗ್ರಾಮ ದೇವತೆಯನ್ನು ಕುಂಬಾರ ಓಣಿಯ ದೇವಸ್ಥಾನಕ್ಕೆ ಹಾಗೂ ಸಹೋದರಿ ಶಾರದಾ ದೇವಿಯ ಮೂರ್ತಿಯನ್ನು ಹೊರಪೇಟಗಲ್ಲಿಯ ದೇವಸ್ಥಾನದ ಮೂಲ ಸ್ಥಳಕ್ಕೆ ಕರೆದೊಯ್ದು ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆಯ ಜಾತ್ರೆಗೆ ಮಂಗಳವಾರ ತಡರಾತ್ರಿ ಅದ್ಧೂರಿಯಾಗಿ ತೆರೆಕಂಡಿತು.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ಗ್ರಾಮ ದೇವತೆ ಜಾತ್ರೆ ಕಳೆದ ಐದು ದಿನಗಳಿಂದ ಬಹಳ ಸಡಗರ, ಸಂಭ್ರಮದಿಂದ ಜರುಗಿತು. ಗ್ರಾಮ ದೇವತೆಯನ್ನು ಕುಂಬಾರ ಓಣಿಯ ದೇವಸ್ಥಾನಕ್ಕೆ ಹಾಗೂ ಸಹೋದರಿ ಶಾರದಾ ದೇವಿಯ ಮೂರ್ತಿಯನ್ನು ಹೊರಪೇಟಗಲ್ಲಿಯ ದೇವಸ್ಥಾನದ ಮೂಲ ಸ್ಥಳಕ್ಕೆ ಕರೆದೊಯ್ದು ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆಯ ಜಾತ್ರೆಗೆ ಮಂಗಳವಾರ ತಡರಾತ್ರಿ ಅದ್ಧೂರಿಯಾಗಿ ತೆರೆಕಂಡಿತು.

ಕಳೆದ 5 ದಿನಗಳವರೆಗೆ ದೇವಿಯ ಮಹಾಮೂರ್ತಿಗಳಿಗೆ ಮುದ್ದೇಬಿಹಾಳ ಪಟ್ಟಣ ಅಲ್ಲದೇ ಸುತ್ತಮುತ್ತಲಿನ ಲಕ್ಷಾಂತರ ಭಕ್ತರು ಪ್ರತಿದಿನ ದರ್ಶನ ಪಡೆದು ನೈವೇದ್ಯ ಹಾಗೂ ಉಡಿ ತುಂಬಿ ದೇವಿಯ ಕೃಪೆಗೆ ಪಾತ್ರರಾದರು. ತಾಲೂಕಿನ ಬಸರಕೋಡ ಗ್ರಾಮದ ನಾಡಗೌಡ ಧಣಿಗಳ ಅಂದಿನ ಮುದ್ದಬ್ಬೆ ಎಂಬ ಹೆಸರಿನಿಂದ ಮುದ್ದೇಬಿಹಾಳವನ್ನು ಕಟ್ಟಿ ಊರಿನ ಮಧ್ಯಭಾಗದಲ್ಲಿ ಗ್ರಾಮ ದೇವತೆಯ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದ್ದರು ಎಂಬ ಪ್ರತೀತಿ ಇದೆ.ಇಂದಿನ ಜಾತ್ರೆ ಪ್ರಾರಂಭಕ್ಕೂ ಮುನ್ನ ಬಸರಕೋಡ ನಾಡಗೌಡ ಧಣಿಗಳ ಮನೆಯಿಂದ ಸೀರೆ ಮಾಂಗಲ್ಯ, ಕಾಲುಂಗುರದೊಂದಿಗೆ ಉಡಿಯಕ್ಕಿ ಬಂದ ಮೇಲೆಯೇ ಜಾತ್ರೆ ಪ್ರಾರಂಭವಾಗುತ್ತದೆ. ಈ ಬಾರಿಯೂ ಪ್ರತಿಷ್ಠಿತ ನಾಡಗೌಡ ಧಣಿಗಳ ಕುಟುಂಬದ ಸಿಂಧೂಬಲ್ಲಾಳರಾಜ ನಾಡಗೌಡ ಹಾಗೂ ನೀಲಕಂಠರಾವ ನಾಡಗೌಡ, ಚಿನ್ನುಧಣಿ ನಾಡಗೌಡ ಅವರು ಜಾತ್ರೆಗೆ ಚಾಲನೆ ನೀಡಿದರು. ಗ್ರಾಮ ದೇವತೆ ಜಾತ್ರಾ ಕಮೀಟಿಯ ಮುಖ್ಯಸ್ಥರಾದ ಶರಣು ಸಜ್ಜನ, ಸುನಿಲ ಇಲ್ಲೂರ, ಪ್ರಭುರಾಜ ಕಲಬುರ್ಗಿ, ಸಂಗನಗೌಡ ಬಿರಾದಾರ(ಜಿಟಿಸಿ), ಸತೀಶ ಓಸ್ವಾಲ್, ಡಾ.ವಿರೇಶ ಪಾಟೀಲ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸುಧೀರ ನಾವದಗಿ, ಮುತ್ತು ಕಡಿ, ಎಂ.ಬಿ.ನಾವದಗಿ, ಸುರೇಶಗೌಡ ಪಾಟೀಲ, ವಿಕ್ರಮ ಓಸ್ವಾಲ್, ವೆಂಕನಗೌಡ ಪಾಟೀಲ, ರಾಜು ಕರಡ್ಡಿ, ಕಾಮರಾಜ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಜಾತ್ರೆ ನೇತೃತ್ವ ವಹಿಸಿಕೊಂಡಿದ್ದರು. ಎಲ್ಲರೂ ಒಗ್ಗಟ್ಟಾಗಿ ಅತ್ಯಂತ ಅದ್ದೂರಿಯಾಗಿ ಜಾತ್ರೆಯನ್ನು ನೆರವೇರಿಸಿದ ಬಗ್ಗೆ ಶ್ಲಾಘನೀಯ ವ್ಯಕ್ತವಾಗಿದೆ.

ಡೊಳ್ಳಿನ ಹಾಡಿಕೆ, ಹೊಲದಲ್ಲಿ ಮಟ್ಟಗಾಡಿ ಸ್ಪರ್ಧೆ, ಎತ್ತಿನಗಾಡಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜಾನಪದ ಜಾತ್ರೆ, ರಾಜ್ಯಮಟ್ಟದ ತೆರೆಬಂಡಿ ಸ್ಪರ್ಧೆ, ಜಂಗೀ ನಿಕಾಲಿ ಕುಸ್ತಿ ಹಾಗೂ ಭಾರ ಎತ್ತುವ ಸ್ಪರ್ಧೆ ಅಲ್ಲದೇ, ಮದ್ದು ಸುಡುವ ಆಕಾಶದತ್ತ ಚಿತ್ತಾರ ಮೂಡಿಸುವ ಕಾರ್ಯ ಭಕ್ತರ ಜನಮನ ರಂಜಿಸಿತು. ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ ಸ್ಪರ್ಧಾಳುಗಳಿಗೆ ಜಾತ್ರಾ ಉತ್ಸವ ಕಮಿಟಿ ಬಹುಮಾನ ನೀಡಲಾಯಿತು.

ಹಿನ್ನಲೆ ಗಾಯಕಿ ಅನುರಾಧ ಭಟ್ಟ ಸೇರಿದಂತೆ ಖ್ಯಾತ ಹಿನ್ನೆಲೆ ಗಾಯಕರು, ಜಾನಪದ ಕಲಾವಿದರು, ಭರತ ನಾಟ್ಯ ನೃತ್ಯಗಾರರು, ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.

---------

ಬಾಕ್ಸ್

ಎಲ್ಲರ ಬೆಂಬಲದಿಂದ ಜಾತ್ರೆ ಯಶಸ್ಸು

ಗ್ರಾಮ ದೇವತೆ ಜಾತ್ರೆಯ ಸಂಪೂರ್ಣ ಯಶಸ್ಸಿಗೆ ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಪಟ್ಟಣದ ಎಲ್ಲ ಗಣ್ಯ ವ್ಯಾಪಾರಸ್ಥರ, ವಿವಿಧ ಸಂಘಸಂಸ್ಥೆಯ ಮುಖಂಡರ, ರಾಜಕೀಯ ಮುಖಂಡರ, ಮಹಿಳಾ ಸಂಘಗಳ ಮುಖ್ಯಸ್ಥರ ಸಭೆ ನಡೆಸಿ ತಾಲೂಕಾ ಮಟ್ಟದ ಎಲ್ಲ ಹಿರಿಯ ಹಾಗೂ ಕಿರಿಯ ಸರ್ಕಾರಿ ಅಧಿಕಾರಿಗಳಿಗೆ ಜಾತ್ರೆಯ ಯಶಸ್ವಿಗೆ ಸಹಕಾರ ನೀಡುವಂತೆ ಕೋರಿದ್ದರು. ಅಲ್ಲದೇ, ಜಾತ್ರೆಯ ವೇಳೆ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಿದ್ದರು. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಕುಡಿಯುವ ನೀರು ಸೇರಿ ಮೂಲ ಸೌಲಭ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದರು. ಜಾತ್ರಾ ಕಮಿಟಿ ಮುಖಂಡರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲುವ ಮೂಲಕ ಜಾತ್ರೆ ಯಶಸ್ಸಿಗೆ ಸಾಕ್ಷಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ