ಗದಗ: ನಗರದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಹಾಗೂ ಸಂತ ಸೇವಲಾಲ ಜಯಂತಿ ಅಂಗವಾಗಿ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳಿಂದ ಬೃಹತ್ ಮೆರವಣಿಗೆ ನಡೆಯಿತು.
ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಸ್ತೆಬದಿ ಕಟ್ಟಡಗಳ ಮೇಲೆ ಕಿಕ್ಕಿರಿದು ಸೇರಿದ್ದ ಯುವ ಸಮೂಹ ಮೆರವಣಿಗೆಯನ್ನ ಕಣ್ತುಂಬಿಕೊಂಡರು. ಬೃಹತ್ ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಶಿವಾಜಿ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಶಿವಾಜಿ, ಶ್ರೀರಾಮನ ಕೇಸರಿ ಧ್ವಜಗಳು ರಾರಾಜಿಸಿದವು.ನಗರದ ಮುನ್ಸಿಪಲ್ ಮೈದಾನದಲ್ಲಿ ಮೆರವಣಿಗೆ ಸಮಾಪ್ತಿಗೊಂಡಿತು. ಮೆರವಣಿಗೆಗೆ ಬೀಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಛತ್ರಪತಿ ಶಿವಾಜಿ ಆದರ್ಶ ಪಾಲಿಸಿಮುಳಗುಂದ: ಶಿವಾಜಿ ಮಹಾರಾಜರು ದೇಶದ ಹಿಂದು ಸಂಸ್ಕೃತಿ, ಸಂಪ್ರದಾಯ ರಕ್ಷಣೆಗೆ ಜೀವನವನ್ನೆ ಮುಡುಪಾಗಿಟ್ಟವರು. ಎಲ್ಲರನ್ನು ಸಹೋದರತ್ವ, ಸಮಾನತೆ, ಸಹಿಷ್ಣುತೆಯಿಂದ ನಡೆಸಿಕೊಂಡಿದ್ದಾರೆ ಎಂದು ಕ್ಷತ್ರೀಯ ಮರಾಠ ಸಂಘದ ಅಧ್ಯಕ್ಷ ವೈ.ಕೆ. ಶಿರಹಟ್ಟಿ ತಿಳಿಸಿದರು.ಸ್ಥಳೀಯ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶಿವಾಜಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವುದರ ಜತೆಗೆ ಅವರನ್ನು ಆರಾಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.ಈ ವೇಳೆ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಮುಖಂಡರಾದ ಮುದಕಪ್ಪ ಬಡಿಗೇರ, ಪರಸಣ್ಣ ಕಳ್ಳಿಮನಿ, ತಿರಕಪ್ಪ ಸಂಭೋಜಿ, ಬಿ.ಎಲ್. ಜಾಧವ, ಮಂಜುನಾಥ ಆರೇರ, ನಿಂಗಪ್ಪ ಕಳ್ಳಿಮನಿ, ಮಾರುತಿ ಜಾಧವ, ಮುನೀರ್ ನದ್ದಿಮುಲ್ಲಾ, ಎಂ.ಸಿ. ಸಜ್ಜನ, ಬಸವರಾಜ ಹೊರಪೇಟಿ ಹಾಗೂ ಮರಾಠ ಸಂಘದ ಸದಸ್ಯರು ಇದ್ದರು.