ರೈತ ದಸರಾದಲ್ಲಿ ಡಿಸಿಎಂ, ಸಚಿವರ ಅದ್ಧೂರಿ ಮೆರವಣಿಗೆ

KannadaprabhaNewsNetwork |  
Published : Oct 09, 2024, 01:42 AM IST
08ಕೆಪಿಎಸ್ಎನ್ಡಿ3ಎ:  | Kannada Prabha

ಸಾರಾಂಶ

ಸಿಂಧನೂರು ದಸರಾ ಉತ್ಸವದ ಅಂಗವಾಗಿ ರೈತ ದಸರಾ ಮೆರವಣಿಗೆಗೆ ಗಾಂಧಿ ವೃತ್ತದಲ್ಲಿ ಜೋಡೆತ್ತುಗಳ ಪ್ರತಿಮೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ದಸರಾ ಉತ್ಸದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ವಿವಿಧ ಜನಪದ ಕಲಾಮೇಳಗಳು, ಕುಣಿತಗಳು, ರೈತ ವೇಷಧಾರಿ ವಿದ್ಯಾರ್ಥಿಗಳು ಸಾರ್ವಜನಿಕರ ಗಮನ ಸೆಳೆದವು.

ಇಲ್ಲಿನ ಮಿನಿವಿಧಾನಸೌಧ ಕಾರ್ಯಾಲಯದ ಮುಂಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದು ಉತ್ಸವ ಸಮಿತಿ ಮುಖಂಡರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬರುವಿಗಾಗಿ ಕಾದು ಕುಳಿತಿದ್ದರು. ಹೆಲಿಕಾಪ್ಟರ್‌ನಲ್ಲಿ ಬಂದ ಡಿ.ಕೆ.ಶಿವಕುಮಾರ ಅವರು ಸರ್ಕಾರಿ ಪದವಿ ಕಾಲೇಜ್ ಬಳಿ ಇರುವ ಹೆಲಿಪ್ಯಾಡ್‌ನಲ್ಲಿ ಇಳಿದು ನೇರವಾಗಿ ಗಾಂಧಿ ವೃತ್ತಕ್ಕೆ ಬಂದು ಜೋಡೆತ್ತುಗಳ ಪ್ರತಿಮೆಗೆ ಹೂಮಾಲೆ ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಬಸ್ ನಿಲ್ದಾಣ ರಸ್ತೆ, ಬಸವ ವೃತ್ತ, ಬಾಬುಜಗಜೀವನರಾಂ ವೃತ್ತದ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಿರ್ಮಿಸಿದ್ದ ವೇದಿಕೆಗೆ ಶಿವಕುಮಾರ ಮತ್ತು ಇತರ ಮುಖಂಡರನ್ನು ತೆರೆದ ವಾಹನದಲ್ಲಿ ಕರೆ ತರಲಾಯಿತು. ಮೆರವಣಿಗೆಯಲ್ಲಿ ಅಲಂಕೃತಗೊಂಡ ಜೋಡೆತ್ತು, ರೌಡಕುಂದಾ ತಂಡದವರ ಪಾಂಡವರ ವೇಷಭೂಷಣ, ಚಿನ್ನಪ್ಪ ತಂಡದವರ ಹಗಲುವೇಷ, ನಿವೃತ್ತ ಶಿಕ್ಷಕ ಬೀರಪ್ಪ ಶಂಭೋಜಿ ನೇತೃತ್ವದ ಸ್ಪೂರ್ತಿ ಯುವತಿ ಮಂಡಳಿ ಹಾಗೂ ಆಕ್ಸಫರ್ಡ್ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ, ಗೀತಾ ರಾಠೋಡ್ ತಂಡದ ಬಂಜಾರ ನೃತ್ಯ, ಹುಡಾ ತಂಡದವರ ಕೋಲಾಟ ಮೆರವಣಿಗೆ ಆಕರ್ಷಣೆಯನ್ನು ಹೆಚ್ಚಿಸಿದವು. ಆಕ್ಸಫರ್ಡ್ ಮತ್ತು ವಿಜಡಮ್ ಕಾಲೇಜಿನ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೈತ ವೇಷ ಹಾಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತೆರೆದ ವಾಹನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಜೊತೆಯಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್ ಸಚೇತಕ ಸಲೀಂ ಅಮ್ಮದ್, ಶಾಸಕರಾದ ಹಂಪನಗೌಡ ಬಾದರ್ಲಿ, ತುರ್ವಿಹಾಳ ಬಸನಗೌಡ, ಬಸನಗೌಡ ದದ್ದಲ್, ಎನ್.ಎಂ.ನಾಗರಾಜ, ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯರಾದ ಶರಣೇಗೌಡ ಬಯ್ಯಪುರ, ಬಸನಗೌಡ ಬಾದರ್ಲಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಕಲಾಮೇಳಗಳ ವೈಭವ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎಪಿಎಂಸಿ ಟೆಂಡರ್ ಹಾಲ್‌ನಲ್ಲಿ ನಿರ್ಮಿಸಿದ್ದ ವೇದಿಕೆ ಮೇಲೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನಪದ ಕಲಾವಿದರ ಜೋಗತಿ ನೃತ್ಯ ಪ್ರೇಕ್ಷಕರನ್ನು ರಂಜಿಸಿತು. ವೇದಿಕೆಯ ಮುಂಭಾಗದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸಿರಿಧಾನ್ಯಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ