ಧಾರವಾಡ: ಸೋಮವಾರ ಮಧ್ಯಾಹ್ನದ ವೇಳೆ ಅತ್ತ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ, ಮಂದಿರದ ಉದ್ಘಾಟನೆ ನಡೆಯುತ್ತಿದ್ದರೆ, ಇತ್ತ ಧಾರವಾಡದಲ್ಲಿ ಅದೇ ಸಮಯಕ್ಕೆ ರಾಮನ ಭಕ್ತರು ಅಷ್ಟೇ ಪ್ರಮಾಣದ ಭಕ್ತಿಯಲ್ಲಿ ರಾಮನಿಗೆ ವಿಶೇಷ ಪೂಜೆ, ಜೈ ಘೋಷಗಳು, ಕುಣಿತ ಹಾಗೂ ರಾಮನ ಜಪ ಮಾಡುತ್ತ ಅಕ್ಷರಶಃ ರಾಮೋತ್ಸವ ಆಚರಿಸಿದರು.
ಧಾರವಾಡದ ಜೆಎಸ್ಸೆಸ್ ವಿದ್ಯಾಗಿರಿ ಅಂತಹ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿದ್ದರೆ ಪ್ರಜೆಂಟೇಶನ್, ಬಾಸಲ್ ಮಿಶನ್‌ನಂತಹ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಿದವು. ಇನ್ನು ಹಲವು ಬೆಳಗ್ಗೆ 8 ರಿಂದ 11ರ ವರೆಗೆ ಮಾತ್ರ ಶಾಲೆ ನಡೆಸಿದವು. ರಾಮ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮದ ನೇರ ಪ್ರಸಾರವನ್ನು ಮನೆಯಲ್ಲಿ ಮಾತ್ರವಲ್ಲದೇ ಪ್ರಮುಖ ಸ್ಥಳಗಳಲ್ಲಿ ಪರದೆ ಹಾಕಿ ಸಾರ್ವಜನಿಕವಾಗಿಯೂ ನೋಡಲಾಯಿತು. ಪ್ರಾಣ ಪ್ರತಿಷ್ಠಾಪನೆ ನಂತರ ಪೂಜೆ ನಡೆಸಿ ಬಹುತೇಕ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ಮಾಡಿದ್ದು ವಿಶೇಷ. ಮಕ್ಕಳಂತೂ ರಾಮ-ಸೀತಾ-ಲಕ್ಷ್ಮಣ-ಹನುಮಂತನ ವೇಷ ಧರಿಸಿ ಸಂಭ್ರಮಿಸಿದರು. ದಶಕಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಹಾಗೂ ಮಂದಿರದ ಉದ್ಘಾಟನೆಯ ಸಂತಸದ ಭಾವ ಮಾತ್ರ ಸೋಮವಾರ ರಾಮನ ಭಕ್ತರಲ್ಲಿ ಎದ್ದು ಕಾಣುತ್ತಿತ್ತು.
ಮುಳ್ಳಿನ ಹೆಜ್ಜೆ ಕುಣಿತ: ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ರಾಮೋತ್ಸವ ವಿಶೇಷವಾಗಿ ನಡೆಯಿತು. ಗ್ರಾಮದ ಭವಾನಿ ಹೆಜ್ಜೆ ಮೇಳದ ಯುವಕರು ಮುಳ್ಳಿನ ಮೇಳದಲ್ಲಿ ಹೆಜ್ಜೆ ಹಾಕಿ ರಾಮನಿಗೆ ಭಕ್ತಿ ಅರ್ಪಿಸಿದರು. ಗ್ರಾಮದೇವತೆ ದೇವಸ್ಥಾನದಿಂದ ಕಲ್ಮೇಶ್ವರ ದೇವಸ್ಥಾನ ವರೆಗೆ ಹೆಜ್ಜೆ ಕುಣಿತದಲ್ಲಿ ಬಂದು ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅನ್ನ ಸಂತರ್ಪಣೆ ಜರುಗಿತು. ಗ್ರಾಮದ ಹಿರಿಯರು ಇದ್ದರು. ಇನ್ನು, ಬೇಂದ್ರೆ ನಗರ ಕ್ರಾಸ್‌ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಕಲಾವಿದ ಮಂಜುನಾಥ ಮರಳಿನಲ್ಲಿ ಅದ್ಭುತವಾಗಿ ರಾಮ ಮಂದಿರದ ನಿರ್ಮಾಣ ಮಾಡಿ ಗಮನ ಸೆಳೆದರು.ಸಾಧನಕೇರಿ: ಸಾಧನಕೇರಿ ಅಭಿವೃದ್ಧಿ ಸಂಘದ ವತಿಯಿಂದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಾಧನಕೇರಿಯಲ್ಲಿ ಶ್ರೀರಾಮೋತ್ಸವವನ್ನು ಆಚರಿಸಲಾಯಿತು. ಹಿರಿಯರಾದ ಪರಾಂಜಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀರಶೈವ ಮಹಾಸಭಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 140 ವರ್ಷಗಳ ಕಾನೂನು ಹೋರಾಟ ಹಾಗೂ ಶತಕೋಟಿ ಭಾರತೀಯರ 500 ವರ್ಷಗಳ ಕನಸು ಶ್ರೀರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯೊಂದಿಗೆ ನನಸಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಮೋತ್ಸವದಲ್ಲಿ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್ ಹೇಳಿದರು. ಸಿದ್ದಣ್ಣ ಕಂಬಾರ, ಶಂಕರ ಕುಂಬಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ್ ಇದ್ದರು.