ಶ್ರೀಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಅದ್ಧೂರಿ ತೆಪ್ಪೋತ್ಸವ

KannadaprabhaNewsNetwork |  
Published : Feb 20, 2026, 01:45 AM IST
೧೯ಕೆಎಂಎನ್‌ಡಿ-೨ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಾಲಯದಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ಜರುಗಿತು. | Kannada Prabha

ಸಾರಾಂಶ

ಪಾವನಗಂಗೆಯ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತೆಪ್ಪದ ಅಲಂಕಾರ ಭಕ್ತರನ್ನು ವಿಶೇಷವಾಗಿ ಗಮನ ಸೆಳೆಯಿತು. ತೆಪ್ಪವನ್ನು ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿದ ನಂತರ ಕಲ್ಯಾಣಿಯ ಮಧ್ಯ ಭಾಗದಲ್ಲಿ ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಗಂಗಾರತಿ ಬೆಳಗಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಇಲ್ಲಿಗೆ ಸಮೀಪದ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಅದ್ಧೂರಿ ತೆಪ್ರೋತ್ಸವ ಜರುಗಿತು.

ಕಳೆದ ಐದು ದಿನಗಳಿಂದ ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು. ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯಿಂದ ಪಾವನ ಗಂಗೆಯ ಕಲ್ಯಾಣಿಯಲ್ಲಿ ತೆಪ್ರೋತ್ಸವ ವೈಭವದಿಂದ ನೇರವೇರಿತು.

ದೇವಾಲಯದಲ್ಲಿ ಶಿವ-ಪಾರ್ವತಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಂದಿಗೆ ಪಾವನ ಗಂಗೆಯ ಕಲ್ಯಾಣಿ ಬಳಿ ತರಲಾಯಿತು.

ಈ ವೇಳೆ ಶ್ರೀಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ತೆಪ್ರೋತ್ಸವದ ರೂವಾರಿ ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿಯ ಸದಸ್ಯ ಆಶಯ್ ಮಧು ದೀಪ ಬೆಳಗುವ ಮೂಲಕ ತೆಪ್ರೋತ್ಸವಕ್ಕೆ ಚಾಲನೆ ನೀಡಿದರು.

ಪಾವನಗಂಗೆಯ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತೆಪ್ಪದ ಅಲಂಕಾರ ಭಕ್ತರನ್ನು ವಿಶೇಷವಾಗಿ ಗಮನ ಸೆಳೆಯಿತು. ತೆಪ್ಪವನ್ನು ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿದ ನಂತರ ಕಲ್ಯಾಣಿಯ ಮಧ್ಯ ಭಾಗದಲ್ಲಿ ಭಾರತೀನಗರದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಗಂಗಾರತಿ ಬೆಳಗಿದರು. ಈ ವೇಳೆ ಭಕ್ತರ ಹರ್ಷೋಧ್ಗಾರ ಮುಗಿಲು ಮುಟ್ಟಿತು. ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ೩೨ ವರ್ಷಗಳ ಹಿಂದೆ ನನ್ನ ತಂದೆ ಜಿ.ಮಾದೇಗೌಡ ಅವರು ಹನುಮಂತನಗರವನ್ನು ಒಂದು ಆಧ್ಯಾತ್ಮಿಕ ಕ್ಷೇತ್ರವಾಗಿ ನಿರ್ಮಾಣ ಮಾಡಲು ಕಂಡಿದ್ದ ಕನಸು ಈಡೇರಿದೆ. ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಲಿ ಎಂಬ ದೃಷ್ಠಿಯಿಂದ ನನ್ನ ಪುತ್ರ ಆಶಯ್ ಮಧು ತೆಪ್ಪೋತ್ಸವದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ನಡೆಯಲು ಕಾರಣರಾಗಿದ್ದಾರೆ. ಮುಂದಿನ ವರ್ಷ ಇನ್ನೂ ಅದ್ಧೂರಿಯಾಗಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಭರವಸೆ ನೀಡಿದರು.

ಕಾರ್ಯಾಧ್ಯಕ್ಷ ಬಿ.ಬಸವರಾಜು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಜ್‌ಮಣಿ, ಪ್ರಾಂಶುಪಾಲರಾದ ಡಾ. ಎಂ.ಎಸ್. ಮಹದೇವಸ್ವಾಮಿ, ಡಾ. ಬಾಲಸುಬ್ರಮಣ್ಯಂ, ಡಾ.ಎಸ್.ಎಲ್. ಸುರೇಶ್, ಡಾ. ಶಾಂತಕುಮಾರ್, ಜಗದೀಶ್, ಸಿ.ವಿ.ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಮುಖಂಡರಾದ ಕೆ.ಎಸ್.ಗೌಡ, ಆರ್. ಸಿದ್ದಪ್ಪ, ಸೇರಿದಂತೆ ಹಲವರಿದ್ದರು.

ಇಂದು ಅನ್ನಪೂರ್ಣೇಶ್ವರಿ ರಥೋತ್ಸವ

ಮಂಡ್ಯ: ವಿದ್ಯಾನಗರದ ಶ್ರೀಅನ್ನದಾತೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಫೆ.20ರಂದು ರಥೋತ್ಸವ ನಡೆಯಲಿದೆ.

ಶಾಂತಕುಮಾರ್ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್ ಸಾರಥ್ಯದಲ್ಲಿ ಬೆಳಗ್ಗೆ 9 ಗಂಟೆಗೆ ಪೂಜೆ ನಂತರ ಮಹಿಳೆಯರಿಂದ ದೇವಿಯ ಉತ್ಸವ, 10 ಗಂಟೆಗೆ ರಥಕ್ಕೆ ಚಾಲನೆ, ಶ್ರೀ ರಾಘವ ತಂಡದಿಂದ ಸಾಕ್ಷೋಪೋನ್ ಮತ್ತು ನಾದಸ್ವರ ಹಾಗೂ ಪೆನ್ ಪೊಳಿಗೆ, ಸಿಂಗಾರಿ, ಮೇಳಂ, ಮಹಿಳೆಯರಿಂದ ಚಂಡೆವಾದ್ಯ, ಮಾಂಗಟಿಡಂ, ಕೂತು ಪರಂಬ, ಕಣ್ಣೂರು, ಕೇರಳ ವಾದ್ಯದೊಂದಿಗೆ ಮೆರವಣಿಗೆ ನಂತರ ಚಿತ್ರನಟ ಶಂಕರ್ ಅಶ್ವಥ್ ಅವರಿಂದ ರಥಕ್ಕೆ ಚಾಲನೆ ದೊರೆಯಲಿದೆ. ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಮನ್ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್ , ರಜಿನಿ ಅರುಣ್ ಕುಮಾರ್ ಭಾಗವಹಿಸುವರು. ಬೆಳಗ್ಗೆ 11.30ಕ್ಕೆ ಕೃಷ್ಣರಾಧೆ ವೇಷದೊಂದಿಗೆ ಮಡಿಕೆ ಹೊಡೆಯುವ, ಸಂಜೆ 5 ಗಂಟೆಗೆ ಮಡಲಕ್ಕಿ ತುಂಬುವ ಕಾರ್ಯಕ್ರಮ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ್ತೆ ಆತಂಕ ಮೂಡಿಸಿದ ಚಿರತೆ ಹೆಜ್ಜೆ!
ಶಿಕ್ಷಣ ದೇಶದ ಅಭಿವೃದ್ಧಿಗೆ ಅಡಿಪಾಯ: ಡಾ. ಪ್ರಾನ್ಸಿಸ್ ಮರಿಯಾ