ಅದ್ಧೂರಿ ಜೋಡು ರಥೋತ್ಸವ: ೫೨ನೇ ಪುರಾಣ ಮಹೋತ್ಸವ ಸಂಪನ್ನ

KannadaprabhaNewsNetwork |  
Published : Sep 22, 2026, 02:15 AM IST
ಕಾರಟಗಿಯ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಪುರಾಣ ಮಂಗಲದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಜೋಡು ರಥೋತ್ಸವ ಅದ್ಧೂರಿಯಾಗಿ ನಡೆಯಿತು. | Kannada Prabha

ಸಾರಾಂಶ

ಕಾರಟಗಿ ಪಟ್ಟಣದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ೨೮ನೇ ಜೋಡು ರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.

ಕಾರಟಗಿ: ವಾಣಿಜ್ಯ ಪಟ್ಟಣದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ೨೮ನೇ ಜೋಡು ರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದ ಮುಂದೆ ಅಲಂಕೃತ ರಥಗಳಿಗೆ ನಿಗದಿತ ಸಮಯ ಸಂಜೆ ೬.೧೦ರ ಮೂಹೂರ್ತಕ್ಕೆ ಅರ್ಚಕ ಮುತ್ತಯ್ಯ ಸ್ವಾಮಿ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಸಲ್ಲಿಸಿದ ಬಳಿಕ ಬೂದುಗುಂಪಾದ ವಿರಕ್ತಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಆಗ ನೆರೆದಿದ್ದ ಭಕ್ತರ ಜಯಘೋಷಣೆಗಳ ನಡುವೆ ನಿಧಾನವಾಗಿ ಚಲಿಸಿದವು. ನೆರೆದ ಭಕ್ತರು ಜೋಡು ರಥಗಳನ್ನು ರಥಬೀದಿಯಲ್ಲಿ ಎಳೆದರು.

ಜೋಡು ರಥಗಳನ್ನು ನಾನಾ ಹೂವುಗಳಿಂದ ಅಲಂಕರಿಸಲಾಗಿತ್ತು. ಬೃಹತ್ ರುದ್ರಾಕ್ಷಿ ಮಾಲೆ ಹಾಗೂ ಹೂವಿನ ಹಾರಗಳಿಂದ ರಥಗಳು ಎರಡು ಭಕ್ತಗಣದ ಕಣ್ಮನ ಸೆಳೆಯುತ್ತಿದ್ದವು. ವಿವಿಧ ಭಜನಾ ತಂಡ, ಭಾಜಾಭಜಂತ್ರಿ, ಡೊಳ್ಳು, ಸೇರಿದಂತೆ ವಿವಿಧ ವಾದ್ಯಮೇಳಗಳ ನಡುವೆ ರಥಗಳು ಪಾದಗಟ್ಟೆ ವರೆಗೆ ತಲುಪಿ ಮರಳಿ ಸ್ವಸ್ಥಾನಕ್ಕೆ ಬಂದು ತಲುಪಿದವು.

ರಥಬೀದಿಯ ಎರಡು ಬದಿಯ ಮನೆಗಳ ಮೇಲೆ ಹಾಗೂ ರಸ್ತೆಯ ಬದಿಯಲ್ಲಿ ನಿಂತ ಭಕ್ತರು ರಥಕ್ಕೆ ಬಾಳೆಹಣ್ಣು, ಹೂ ಮತ್ತು ಉತ್ತುತ್ತಿಗಳನ್ನು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಭಜನೆ, ಡೊಳ್ಳು, ಭಾಜಾ ಭಜಂತ್ರಿ, ತಾಷಾ ಮೊದಲಾದ ವಾದ್ಯಗಳು ರಥೋತ್ಸವಕ್ಕೆ ಮೆರಗು ತಂದವು.

೨೭ನೇ ವರ್ಷದ ಜೋಡು ರಥೋತ್ಸವದೊಂದಿಗೆ ಶ್ರಾವಣ ಮಾಸದಲ್ಲಿ ತಿಂಗಳ ಕಾಲ ನಡೆದ ಪುರಾಣ ಪ್ರವಚನ ಸೋಮವಾರ ರಾತ್ರಿ ಸಂಪನ್ನಗೊಂಡಿತು. ಬೆಳಗ್ಗೆ ಶರಣಬಸವೇಶ್ವರರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ವಿಶೇಷ ಪೂಜೆ ನಡೆದವು. ಜತಗೆ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ, ಮಡಿತೇರನ್ನು ವಿಧಿವಿಧಾನಗಳ ಪ್ರಕಾರ ಎಳೆಯಲಾಯಿತು.

ಮಾಜಿ ಶಾಸಕ ಬಸವರಾಜ ದಢೇಸೂಗೂರು ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದರು. ರಥೋತ್ಸವದಲ್ಲೂ ಪಾಲ್ಗೊಂಡರು. ಸಂಜೆ ದೇವಸ್ಥಾನದಲ್ಲಿ ಪುರಾಣ ಸಮಿತಿಯ ಮರಳಸಿದ್ದಯ್ಯ ಹಿರೇಮಠ, ಗುಂಡಪ್ಪ ಕುಳಗಿ, ಮಲ್ಲಿಕಾರ್ಜುನ ಕೊಟಗಿ, ಅಮರೇಶ ಸಾಲಗುಂದಿ, ಶರಣಪ್ಪ ಗದ್ದಿ, ಉಮ್ಮೇಶ ಭಂಗಿ, ಸಿದ್ದರಾಮಪ್ಪ ಪಲ್ಲೇದ, ರಾಕೇಶ ಕಂಚಿ, ವೀರೇಶ ಸೋಮಲಾಪುರ ಹಾಗೂ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ನಾಳೆ ಬೃಹತ್ ರಕ್ತದಾನ ಶಿಬಿರ
ಸಮಾಜಮುಖಿ ಚಿಂತನೆ, ಅಭಿವೃದ್ಧಿಗೆ ಸದಾಕಾಲ ಮನ್ನಣೆ: ಸಂಸದ ಬೊಮ್ಮಾಯಿ