ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿದ್ವಯರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಜಿಲ್ಲೆಯ ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶನಿವಾರ ಅದ್ಧೂರಿ ಸ್ವಾಗತ ಕೋರಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿದ್ವಯರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಜಿಲ್ಲೆಯ ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶನಿವಾರ ಅದ್ಧೂರಿ ಸ್ವಾಗತ ಕೋರಿದರು.
ಜಿಲ್ಲೆಯ ಗಡಿಭಾಗ ಮದ್ದೂರು ತಾಲೂಕು ನಿಡಘಟ್ಟ ಗ್ರಾಮಕ್ಕೆ ಆಗಮಿಸಿದ ಸಚಿವರನ್ನು ಜಿಲ್ಲಾಡಳಿತದ ಪರ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಚಿವರುಗಳನ್ನು ಹೂ ಗುಚ್ಛ ನೀಡಿ ಸ್ವಾಗತಿಸಿದರೆ, ಜಿಲ್ಲೆಯ ಗಡಿಭಾಗದಿಂದ ಮಂಡ್ಯದವರೆಗೆ ಅಲ್ಲಲ್ಲಿ ಶಾಸಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
ಮಂಡ್ಯದ ಫ್ಯಾಕ್ಟರಿ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿವಿಧ ಕಲಾತಂಡಗಳ ಮೂಲಕ ಸಚಿವರುಗಳನ್ನು ಸ್ವಾಗತಿಸಿದರು. ಕ್ರೇನ್ ಮೂಲಕ ಬೃಹತ್ ಕಬ್ಬಿನ ಹಾರ, ಸೇಬಿನ ಹಾರ, ಹೂವಿನ ಹಾರ ಹಾಕಿ ಸನ್ಮಾನಿಸಿದರು. ನಂತರ ತೆರದ ವಾಹನದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಹಾಗೂ ಎಂಎಲ್ಸಿ ದಡದಪುರದ ಶಿವಣ್ಣ ಅವರನ್ನು ಮೆರವಣಿಗೆ ಮೂಲಕ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ವರೆಗೆ ಮೆರವಣಿಗೆಯಲ್ಲಿ ಕರೆತಂದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಅಲ್ಲಲ್ಲಿ ಕ್ರೇನ್ ಮೂಲಕ ಮೂಸಂಬಿ, ಕಬ್ಬು, ಹಾಗೂ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು. ಇದೇ ವೇಳೆ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. ಈ ವೇಳೆ ಜಿಲ್ಲೆಯ ಶಾಸಕರು, ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ನೂತನ ಸಚಿವರಿಗೆ ಅಜ್ಜಯ್ಯನ ಫೋಟೋ ಗಿಫ್ಟ್.!
ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ಕಾರ್ಯಕ್ರಮ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಮಾರಂಭದಲ್ಲಿ ಕಾರ್ಯಕರ್ತರು ಅಜ್ಜಯ್ಯನ ಫೋಟೋವನ್ನು ಉಡುಗಡೆಯಾಗಿ ನೀಡಿದರು.
ಶಾಸಕರಾದ ಶಾಸಕ ಪಿ.ರವಿಕುಮಾರ್, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಡದಪುರ ಶಿವಣ್ಣ, ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಚಿವರ ಸ್ವಾಗತದ ವೇಳೆ ಬೈಕ್ ಗೆ ಹಾನಿ:
ಸಚಿವರನ್ನು ಸ್ವಾಗತಿಸಲು ಪಟಾಕಿ ಸಿಡಿಯುವಾಗ ಕಿಡಿಯಿಂದ ಎರಡು ಬೈಕ್ ಗಳಿಗೆ ಹಾನಿಯಾದ ಘಟನೆ ನಗರದ ಶುಗರ್ ಪ್ಯಾಕರಿ ಸರ್ಕಲ್ ಬಳಿ ಶನಿವಾರ ನಡೆಯಿತು. ಸಚಿವ ಆಗಮಿಸುವ ಮುನ್ನ ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ಪಟಾಕಿ ಕಿಡಿಗಳಿಗೆ ಎರಡು ಬೈಕ್ ಗಳಿಗೆ ಹಾನಿ ಮಾಡಿದೆ. ಹಾನಿಯಾಗಿ ಬೈಕ್ ಪಕ್ಕದಲ್ಲೆ ರಟ್ಟುಗಳು ಬೆಂಕಿ ಹೊತ್ತಿಉರಿದ ಘಟನೆ ನಡೆಯಿತು.ಜಿಲ್ಲಾಡಳಿತದಿಂದ ಸಚಿವರಿಗೆ ಸಂಪ್ರದಾಯಕ ಸ್ವಾಗತ
ಮದ್ದೂರು:ಸಚಿವರಾದ ನಂತರ ಪ್ರಥಮ ಬಾರಿಗೆ ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಜಿಲ್ಲಾ ಆಡಳಿತದ ಪರ ಸಾಂಪ್ರದಾಯಕ ಸ್ವಾಗತ ಕೋರಲಾಯಿತು.
ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲೆಯ ಗಡಿ ಭಾಗ ನಿಡಘಟ್ಟ ಗ್ರಾಮಕ್ಕೆ ಬೆಳಗ್ಗೆ ಆಗಮಿಸಿದ್ದ ಸಚಿವದ್ವಯರಿಗೆ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ನಂದಿನಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬೆಟ್ಟಸ್ವಾಮಿ ಗೌಡ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಚಿವದ್ವಯರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.ಇದಕ್ಕೂ ಮೊದಲು ಸಚಿವರಾದ ಎನ್.ಚಲುವರಾಯಸ್ವಾಮಿ, ಬಾಲಕೃಷ್ಣ ಅವರು ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ವಿಶ್ವ ಒಕ್ಕಲಿಗರ ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆದು ಶ್ರೀಗಳನ್ನು ಅಭಿನಂದಿಸಿದರು. ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ ಸಚಿವರಿಗೆ ಸಾಥ್ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.