ದಾವಣಗೆರೆ: ಪತ್ನಿ, ಮಗ ಹಾಗೂ ತಂದೆಯೊಂದಿಗೆ ಬರುತ್ತಿದ್ದ ವಿಕಲಚೇತನ ವ್ಯಕ್ತಿಯ ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಜ್ಜ, ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ತಾಲೂಕಿನ ಗಾಂಧಿ ನಗರ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ತ್ರಿಚಕ್ರ ಮೋಟಾರ್ ಬೈಕ್‌ನಲ್ಲಿ ಪತ್ನಿ ರೇಣುಕಾಬಾಯಿ (45), ಮಗ ಪ್ರೀತಂ (18) ಹಾಗೂ 2 ವರ್ಷದ ಮೊಮ್ಮಗ ಯುವರಾಜ ನಾಯ್ಕ ಜೊತೆಗೆ ಸಾಗುತ್ತಿದ್ದರು. ಈ ವೇಳೆ ಗಾಂಧಿ ನಗರ ಬಳಿ ರಾಜ್ಯ ಹೆದ್ದಾರಿ-65ರಲ್ಲಿ ದಾವಣಗೆರೆಯಿಂದ ಜಗಳೂರು ಕಡೆ ಹೊರಟಿದ್ದ ಕೆಎ 43, ಪಿ. 2172 ನಂಬರ್ ಕಾರು ಜಗಳೂರು ಕಡೆಯಿಂದ ದಾವಣಗೆರೆಗೆ ಬರುತ್ತಿದ್ದ ಕೆಎ 17, ಎಚ್ಎಫ್ 6569 ನಂಬರ್‌ನ ತ್ರಿಚಕ್ರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಚಂದ್ರನಾಯ್ಕ, ಯುವರಾಜ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಂದ್ರನಾಯ್ಕನ ಪತ್ನಿ ರೇಣುಕಾಬಾಯಿ, ಮಗ ಪ್ರೀತಂ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ. ಮೂವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾರ್ಥೀವ ಶರೀರಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- - -