ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣಕ್ಕೆ ತೆರಳುವ ವೇಳೆ ರೈಲು ಹಳಿ ದಾಟುತ್ತಿದ್ದ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಇಲ್ಲಿನ ರೈಲು ನಿಲ್ದಾಣ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.
ಸೋಮವಾರ ಬೆಳಗ್ಗೆ ಮಕ್ಕಳಿಗೆ ಶಾಲೆಗೆ ಸಮಯವಾಗುತ್ತದೆ ಎಂಬ ಕಾರಣಕ್ಕೆ ಅಜ್ಜಿ ಅವರನ್ನು ಮುಂಜಾನೆ ಎಬ್ಬಿಸಿ, ದೊಡ್ಡಬಳ್ಳಾಪುರದಿಂದ ಹಿಂದೂಪುರಕ್ಕೆ ತೆರಳುವ ರೈಲು ಹತ್ತಿಸಲು ರೈಲ್ವೆ ನಿಲ್ದಾಣದತ್ತ ಕರೆದೊಯ್ಯುತ್ತಿದ್ದರು. ನಿಲ್ದಾಣಕ್ಕೆ ಸುಮಾರು 150 ಮೀಟರ್ ದೂರವಿದ್ದ ಸಂದರ್ಭದಲ್ಲಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿದೆ. ರೈಲು ನಿಲ್ದಾಣ ಸಮೀಪ ಹಳಿ ಬದಲಾವಣೆ ಮಾರ್ಗ ಗುರುತಿಸದೆ ಅವರು ಹಳಿಗಳ ಮೇಲೆ ನಡೆದು ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರದಿಂದ ಹಿಂದೂಪುರಕ್ಕೆ ಬೆಳಗ್ಗೆ ಸುಮಾರು 6.30ಕ್ಕೆ ರೈಲು ಇರುವ ಹಿನ್ನೆಲೆಯಲ್ಲಿ ಅವರು ನಿಲ್ದಾಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಸಾರ್ವಜನಿಕರು ಹಾಗೂ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಶವಾಗಾರಕ್ಕೆ ರವಾನಿಸಲಾಗಿದೆ.ಘಟನೆ ಕುರಿತು ಯಶವಂತಪುರ ವೃತ್ತ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರೈಲ್ವೆ ನಿಲ್ದಾಣದ ಸಮೀಪ ಹಳಿಯನ್ನು ದಾಟಿ ತೆರಳುವ ಪರಿಸ್ಥಿತಿ ಇರುವುದರಿಂದ ಪದೇಪದೇ ಅವಘಡಗಳು ಎದುರಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲ್ವೆ ನಿಲ್ದಾಣದ ಸಂಪರ್ಕಕ್ಕೆ ಸುರಕ್ಷಿತ ಪಾದಚಾರಿ ಮಾರ್ಗ ಅಥವಾ ಸ್ಕೈವಾಕ್ ನಿರ್ಮಿಸಬೇಕು. ರಾತ್ರಿ ಹಾಗೂ ಮುಂಜಾನೆ ವೇಳೆ ಜನರು ಹಳಿಯ ಮೂಲಕ ಸಂಚರಿಸುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
31ಕೆಡಿಬಿಪಿ1-
--
ಘಟನೆಯಲ್ಲಿ ಮೃತಪಟ್ಟ ಅಜ್ಜಿ ಇರ್ಫಾನಾ (46) ಹಾಗೂ ಆಕೆಯ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (8).