ಅಜ್ಜ-ಅಜ್ಜಿ ಮೊಮ್ಮಕ್ಕಳ ಸಂಬಂಧ ಬೆಸೆದ ಜೆಎಸ್ಸೆಸ್‌

KannadaprabhaNewsNetwork |  
Published : Sep 05, 2024, 12:38 AM IST
ಂಮ | Kannada Prabha

ಸಾರಾಂಶ

ಇಲ್ಲಿಯ ಜನತಾ ಶಿಕ್ಷಣ ಸಂಸ್ಥೆಯ ಮಂಜುನಾಥೇಶ್ವರ ಸಿಬಿಎಸ್‌ಸಿ ಶಾಲೆಯಲ್ಲಿ ಮಂಗಳವಾರ ಪುಟಾಣಿಗಳಿಗೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ನೂರಾರು ಮಕ್ಕಳು ತಮ್ಮ-ತಮ್ಮ ಅಜ್ಜ-ಅಜ್ಜಿಯರೊಂದಿಗೆ ಬಂದು ಖುಷಿಪಟ್ಟರು.

ಧಾರವಾಡ: ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಕಲ್ಪನೆ ಬದಲಾಗಿದೆ. ಪತಿ, ಪತ್ನಿ ಮತ್ತು ಮಕ್ಕಳು ಒಂದು ಕುಟುಂಬವಾಗಿದ್ದು ಅವಿಭಕ್ತ ಕುಟುಂಬ ಅರ್ಥ ಕಳೆದುಕೊಂಡಿದೆ. ಇನ್ನು, ಬಹುತೇಕ ಮಕ್ಕಳು ಅಜ್ಜ-ಅಜ್ಜಿಯರ ಪ್ರೀತಿ ಅನುಭವಿಸುತ್ತಿಲ್ಲ. ಈ ನಿಟ್ಟಿನಲ್ಲಿ ಇಲ್ಲಿಯ ಶಾಲೆಯೊಂದು ಅವರ ಪ್ರೀತಿ, ಅಕ್ಕರೆ ಹೇಗಿರುತ್ತದೆ ಎಂಬುದನ್ನು ತೋರಿಸಲು ವಿಭಿನ್ನ ಬಗೆಯ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಅಜ್ಜ-ಅಜ್ಜಿಯರು ಮೊಮ್ಮಕ್ಕಳೊಂದಿಗೆ ಖುಷಿಪಟ್ಟರೆ, ಮೊಮ್ಮಕ್ಕಳು ಅಜ್ಜ-ಅಜ್ಜಿಯಂದಿರ ವೇಷ ಧರಿಸಿ ಅಚ್ಚರಿ ಮೂಡಿಸಿದರು.

ಇಲ್ಲಿಯ ಜನತಾ ಶಿಕ್ಷಣ ಸಂಸ್ಥೆಯ ಮಂಜುನಾಥೇಶ್ವರ ಸಿಬಿಎಸ್‌ಸಿ ಶಾಲೆಯಲ್ಲಿ ಮಂಗಳವಾರ ಪುಟಾಣಿಗಳಿಗೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ನೂರಾರು ಮಕ್ಕಳು ತಮ್ಮ-ತಮ್ಮ ಅಜ್ಜ-ಅಜ್ಜಿಯರೊಂದಿಗೆ ಬಂದು ಖುಷಿಪಟ್ಟರು.

ಸೆಪ್ಟೆಂಬರ್ ಎರಡನೇ ಭಾನುವಾರ ಅಜ್ಜ-ಅಜ್ಜಿಯಂದಿರ ದಿನವಾಗಿ ಆಚರಿಸಲಾಗುತ್ತಿದೆ. ಇದೇ ಕಾರಣಕ್ಕೆ ಮುಂಚಿತವಾಗಿ ಈ ಶಾಲೆಯಲ್ಲಿ ಅಜ್ಜ-ಅಜ್ಜಂದಿರ ದಿನ ಆಚರಿಸಲಾಯಿತು. ಮಕ್ಕಳು ಅಜ್ಜ-ಅಜ್ಜಿಯರ ವೇಷ ತೊಟ್ಟು, ಅವರೊಂದಿಗೆ ಶಾಲೆಗೆ ಬಂದಿದ್ದರು. ಇವರನ್ನು ಶಾಲಾ ಸಿಬ್ಬಂದಿ ಹೂವು ಎರಚಿ ಸ್ವಾಗತಿಸಿಕೊಂಡರು. ಬಳಿಕ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಒಂದು ಹೊಸ ಜಗತ್ತೇ ಸೃಷ್ಟಿಯಾಗಿತ್ತು. ಮಕ್ಕಳು ಅನೇಕ ಬಗೆಯ ಸನ್ನಿವೇಶಗಳನ್ನು ಸೃಷ್ಟಿಸಿ, ಅಚ್ಚರಿ ಮೂಡಿಸಿದ್ದರು. ಮಗುವಾಗಿದ್ದರೂ ಅಜ್ಜಿಯಂತೆ ತೊಟ್ಟಿಲು ತೂಗಿ ಮಗುವನ್ನು ಬಾಲಕಿಯೊಬ್ಬಳು ಸಂತೈಸುತ್ತಿದ್ದಳು. ಮಗುವನ್ನು ಎಣ್ಣೆ ಹಚ್ಚಿ ಪುಟಾಣಿಯೊಂದು ಎರೆಯುತ್ತಿತ್ತು. ಮುದ್ದು ಮುಖದ ಮೇಲೆ ಇಷ್ಟುದ್ದಾ ಮೀಸೆ ಧರಿಸಿ, ತಲೆಯನ್ನೆಲ್ಲ ಬಿಳಿ ಮಾಡಿಕೊಂಡ ಪೋರ ಎಲ್ಲರ ಗಮನ ಸೆಳೆದನು. ಹೀಗೆ ಹಲವಾರು ದೃಶ್ಯಗಳಿಗೆ ಶಾಲೆಯು ಸಾಕ್ಷಿಯಾಯಿತು.

ಮಗು ಹುಟ್ಟಿದಾಗ ಅಜ್ಜಿಯಂದಿರು ಯಾವ ರೀತಿ ಅವುಗಳ ಪಾಲನೆ, ಪೋಷಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದರಿಂದ ಹಿಡಿದು, ಮೊಮ್ಮಕ್ಕಳಿಗೆ ಊಟ ಮಾಡಿಸಿ, ರಾತ್ರಿ ಮಲಗಿಸುವ ವರೆಗಿನ ಸನ್ನಿವೇಶಗಳು ಕಂಡು ಬಂದವು. ಇದೇ ವೇಳೆ ಅಜ್ಜ-ಅಜ್ಜಿಯ ಷಷ್ಠಾಬ್ಧಿ, ತುಲಾಭಾರ ಸೇರಿದಂತೆ ಅನೇಕ ಬಗೆಯ ಸನ್ನಿವೇಷಗಳು ಗಮನ ಸೆಳೆದವು. ವೃದ್ಧಾಶ್ರಮಗಳಲ್ಲಿ ತಂದೆ-ತಾಯಿ ಕಳಿಸುವ ಮಕ್ಕಳಿಗೆ ಬುದ್ಧಿವಾದ ಹೇಳುವಂಥ ಸನ್ನಿವೇಶಗಳು ಇದ್ದವು. ಅಜ್ಜಿಯರು ಮೊಮ್ಮಕ್ಕಳಿಗೆ ಅಡುಗೆ ಮಾಡುವ ಕಲೆ ಸೇರಿದಂತೆ ಮೊಬೈಲ್‌ ಬಿಟ್ಟು ಆಟಗಳಲ್ಲಿ ಮಕ್ಕಳು ಪಾಲ್ಗೊಳ್ಳುವ ಕುರಿತು ಜಾಗೃತಿ ಸಹ ಮೂಡಿಸಿದರು.ಇನ್ನು ಮಕ್ಕಳು ತಮ್ಮ ತಂದೆ-ತಾಯಿ ಸೇವೆ ಮಾಡುವ ಸನ್ನಿವೇಶ, ಕಾಲು ಒತ್ತಿ ಸೇವೆ ಮಾಡಿದರೆ, ಮತ್ತೆ ಕೆಲವು ಮಕ್ಕಳು ಅವರ ಆರೋಗ್ಯ ತಪಾಸಣೆ ಮಾಡುವತ್ತ ಗಮನ ಹರಿಸಿದ್ದರು. ಅನೇಕ ಅಜ್ಜಿಯಂದಿರು ಮೊಮ್ಮಕ್ಕಳಿಗೆ ವಿವಿಧ ಬಗೆಯ ಕೌಶಲ್ಯ ಕಲಿಸುವುದು ಗಮನ ಸೆಳೆಯಿತು. ಒಟ್ಟಿನಲ್ಲಿ ಅಜ್ಜ-ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಸಂಬಂಧಗಳೇ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಹೊಸ ಪೀಳಿಗೆಗೆ ಹಿರಿಯರ ಅವಶ್ಯಕತೆ ಎಷ್ಟಿದೆ ಎಂಬುದನ್ನು ತೋರಿಸಿದ್ದು ಶ್ಲಾಘನೀಯ. ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಪ್ರಾಚಾರ್ಯರಾದ ಸಾಧನಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!