ಮಕ್ಕಳ ವ್ಯಕ್ತಿತ್ವಕ್ಕೆ ಬುನಾದಿ ಹಾಕುತ್ತಿದ್ದ ಅಜ್ಜಿಯಂದಿರು ಕಾಣೆಯಾಗಿದ್ದಾರೆ....

KannadaprabhaNewsNetwork | Published : Nov 20, 2024 12:32 AM

ಸಾರಾಂಶ

ಮಕ್ಕಳ ಕಲಾ ಲೋಕ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಶಂಭೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ‌ ಮಂಗಳವಾರ ನಡೆದ 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌನೇಶ್‌ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮೊಮ್ಮಕ್ಕಳನ್ನು ಸುತ್ತ ಕೂರಿಸಿಕೊಂಡು ಕೈತುತ್ತು ಕೊಡುತ್ತಾ ಕತೆಗಳನ್ನು ಹೇಳುತ್ತಾ ಮಕ್ಕಳ ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಬುನಾದಿ ಹಾಕುತ್ತಾ ತಮ್ಮ‌ದಿನಗಳನ್ನು ಸಾರ್ಥಕಗೊಳಿಸುತ್ತಿದ್ದ ಅಜ್ಜಿಯಂದಿರು ಕಾಣೆಯಾಗಿದ್ದಾರೆ...!

ಹೀಗೆಂದು ಕಡೇಶ್ವಾಲ್ಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಸಾನ್ವಿ ಸುವರ್ಣ ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಕಲಾ ಲೋಕ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಶಂಭೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ‌ ಮಂಗಳವಾರ ನಡೆದ 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆಯನ್ನು ರಿಯಾಲಿಟಿ ಶೋಗಳೆಂದು ಹುಚ್ಚಾಟದಲ್ಲಿ ಪಣಕಿಟ್ಟು ತಂದೆ ತಾಯಿಗಳು ಸಂಭ್ರಮಿಸುತ್ತಿರುವುದನ್ನು ತನ್ನ ಮಾತಿನಲ್ಲಿ ಆಕ್ಷೇಪಿಸಿದ ಸಾನ್ವಿ, ಇದನ್ನೆಲ್ಲಾ ನೋಡುವಾಗ ಅಳುವುದೋ ನಗುವುದೋ ಎಂದು ಗೊತ್ತಾಗುತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಕೌಶಲ್ಯಾಭಿವೃದ್ಧಿಗೆ ಸಮ್ಮೇಳನ‌ ಬೇಕು...: ಬಂಟ್ವಾಳ ತಾಲೂಕು 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಶಂಭೂರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಪ್ರೇಕ್ಷಾ ಮಾತನಾಡಿ, ಮಕ್ಕಳ‌ ಪ್ರತಿಭೆಯನ್ನು ಗುರುತಿಸಿ‌ ಪ್ರೋತ್ಸಾಹಿಸಲು ಇಂತಹ ಸಮ್ಮೇಳನ ಬೇಕು. ಶೈಕ್ಷಣಿಕ‌ಜೀವನದ ಅಭಿವೃದ್ಧಿಗೆ ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆಗಳು ಬೇಕೇಬೇಕು.. ಆಗ ಜ್ಞಾನ ವೃದ್ಧಿಯಾಗುತ್ತದೆ, ಕೌಶಲ್ಯಾಭಿವೃದ್ಧಿಯಾಗುತ್ತದೆ ಎಂದರು. ಸಾಹಿತ್ಯವನ್ನು ಆಲಿಸುವ ಹೇಳುವ ಓದುವ ಹವ್ಯಾಸ ಬೆಳೆಯ ಬೇಕು ಅದರಿಂದ ಸರ್ವತೋಮುಖ ವಿಕಸನ ಸಾಧ್ಯ ಎಂದರು.

ಸಮ್ಮೇಳನದಲ್ಲಿ ಮಕ್ಕಳ ಸ್ವರಚಿತ ಕೃತಿಗಳನ್ನು ಸಾಹಿತಿ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಬಿಡುಗಡೆ ಗೊಳಿಸಿದರು. ಮಕ್ಕಳಲ್ಲಿ ಸಮತೋಲಿತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಇಂತಹಾ ಸಮ್ಮೇಳನ‌ ಉತ್ತಮ ವೇದಿಕೆ ಎಂದವರು ಅಭಿಪ್ರಾಯಪಟ್ಟರು.

ಮಕ್ಕಳ‌ಹುಟ್ಟುವ ಮೊದಲೇ ಎಲ್‌ಕೆಜಿ, ಯುಕೆಜಿ ಸೀಟ್ ಬುಕ್‌ ಮಾಡುವ ಅವಾಸ್ತವ ಶಿಕ್ಷಣ ಪದ್ಧತಿ ಬದಲಾಗಬೇಕೆಂದ‌ ಅವರು, ಮಕ್ಕಳಿಗೆ ಅಂಕ ಗಳಿಕೆಯ ಸಾಧನೆಯನ್ನೇ ಗುರಿಯಾಗಿಸಿದರೆ, ಮಕ್ಕಳು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಾರೆ ಎಂದರು. ಬೆಳ್ತಂಗಡಿ ವಾಣಿ ಪಿ.ಯು. ಕಾಲೇಜಿನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ವಿಭಾ ಕೆ.ಆರ್ ಮಾತನಾಡಿ, ಸಾಹಿತ್ಯದ ಹವ್ಯಾಸ ನಮ್ಮ ಜೀವಕಳೆಯನ್ನು ಹೆಚ್ಚಿಸುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶುಭಹಾರೈಸಿದರು.

ಮಕ್ಕಳ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷ ಆನಂದ ಎ. ಶಂಭೂರು, ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷೆ ಮೋಹಿನಿ ಮತ್ತಿತರ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಜಯರಾಮ ಡಿ. ಪಡ್ರೆ, ಸ್ವಾಗತ ಸಮಿತಿಯ ರಾಜೇಶ್ ಶಾಂತಿಲ ಮತ್ತು ಹೆನ್ರಿ ಬುಕೆಲ್ಲೋ, ಭಾಸ್ಕರ ಅಡ್ವಳ, ಚಿನ್ನಾ ಕಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ‌ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕನ್ನಡ‌ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ಮಾಡಿದರು. ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ನರಿಕೊಂಬು ಶಾಲೆಯ ವಿದ್ಯಾರ್ಥಿನಿ ಕು. ಧೃತಿ ಸ್ವಾಗತಿಸಿದರು. ನಾಯಿಲ ಶಾಲಾ ವಿದ್ಯಾರ್ಥಿನಿ ಹರ್ಷಿತಾ ವಂದಿಸಿದರು. ಅಡ್ಯನಡ್ಕ ಜನತಾ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ಕಾರ್ಯಕ್ರಮ‌ ನಿರ್ವಹಿಸಿದರು. ಕಾರ್ಯಕ್ರಮಕ್ಕೆ‌ ಮುನ್ನ ಶೇಡಿಗುರಿಯಿಂದ‌ ಶಾಲೆಯ ವರೆಗೆ ಭವ್ಯ ಮೆರವಣಿಗೆ ನಡೆಯಿತು.‌ ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಮೆರವಣಿಗೆ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸುಮಾರು ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಾದ ಕಿರು ನಾಟಕ, ಕಲಾ ರಂಗ ಸಂಗಮ, ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

Share this article