ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಕುಖ್ಯಾತ ಅಂತಾರಾಜ್ಯ ನಾಲ್ವರು ಕಳ್ಳರನ್ನು ಬಂಧನ ಮಾಡಿ 514 ಗ್ರಾಂ ಚಿನ್ನ 3 ಕೇಜಿ ಬೆಳ್ಳಿ ಆಭರಣವನ್ನು ವಶಕ್ಕೆ ಪಡೆಯುವಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಕೊಡಂಗು ಸ್ವಾಮಿ (೫೮), ಇಂದಿರರಾಜ್ ಅಲಿಯಾಸ್ ಇಂದ್ರರಾಜ್ (35), ಕೇರಳ ಮೂಲದ ಅಜಿತ್ (23), ಜೇಸುದಾಸ್ ಅಲಿಯಾಸ್ ಯೇಸುದಾಸ್ (36) ಬಂಧಿತ ಆರೋಪಿಗಳಾಗಿದ್ದಾರೆ.ಘಟನೆ ವಿವರ: ಹನೂರು ಪಟ್ಟಣದ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಅವರು ತಮ್ಮ ಸಂಬಂಧಿಕರ ಮದುವೆಗೆ ಹೋಗಿ ವಾಪಸ್ ಬಂದಾಗ ಮನೆಯಲ್ಲಿ 11 ಲಕ್ಷ ಮೌಲ್ಯದ ಬೆಲೆಬಾಳುವ ಚಿನ್ನ, ಬೆಳ್ಳಿ 20 ಸಾವಿರ ನಗದು ಕಳ್ಳತನವಾಗಿರುವ ಬಗ್ಗೆ ಅ.23 ರಂದು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಹನೂರು ಪೊಲೀಸರು ಎಸ್ಪಿ ಡಾ.ಕವಿತಾ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ, ಚಾಮರಾಜನಗರ ವಿಭಾಗದ ಡಿವೈಎಸ್ಪಿ ಲಕ್ಷ್ಮಯ್ಯ ಅವರ ನೇತೃತ್ವದಲ್ಲಿ ಪ್ರಭಾರ ಇನ್ಸ್‌ಪೆಕ್ಟರ್ ಶಿವಮಾದಯ್ಯ, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಪೇದೆಗಳಾದ ತಕೀವುಲ್ಲಾ, ರವಿ, ಬಿಳಿ ಗೌಡ, ವೆಂಕಟೇಶ್, ಕಿಶೋರ್, ಶಿವಕುಮಾರ್, ಲಿಯಾಕತ್ ಆಲಿಖಾನ್, ಚಂದ್ರು, ರಾಮಕೃಷ್ಣ ವಿಶ್ವನಾಥ್ ಅವರನ್ನು ಒಳಗೊಂಡ ಎರಡು ತಂಡ ತಮಿಳುನಾಡು ಕರ್ನಾಟಕ ಕೇರಳ ರಾಜ್ಯದ ವಿವಿಧ ಭಾಗಗಳಲ್ಲಿ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸಿ ಆರೋಪಿಗಳು ಮತ್ತೆ ಕಳ್ಳತನ ಮಾಡಲು ಹಾಗೂ ಕಳವು ಮಾಲುಗಳನ್ನು ಮಾರಾಟ ಮಾಡಲು ಮಲೆಮಹದೇಶ್ವರ ಬೆಟ್ಟ, ಕೊಳ್ಳೇಗಾಲಕ್ಕೆ ಬಂದಿದ್ದ ವೇಳೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ನಂತರ ವಿಚಾರಣೆಗೆ ಒಳಪಡಿಸಲಾಗಿ ಹನೂರು ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ, ಚಾಮರಾಜನಗರ ಪಟ್ಟಣ ಗುಂಡ್ಲುಪೇಟೆ ಮತ್ತು ಬೇಗೂರು ಕಡೆಗಳಲ್ಲಿ ೧೩ ಕಡೆ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ 41,69,000 ಬೆಲೆ ಬಾಳುವ 514.16 ಗ್ರಾಂ ಚಿನ್ನಾಭರಣಗಳು, ಮೂರು ಕೆಜಿ ಬೆಳ್ಳಿ ಆಭರಣಗಳು, 4,400 ನಗದು ಹಣ, ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೆ ಕೋಲಾರ ಜಿಲ್ಲೆಯಲ್ಲಿ ಒಂದು ಕಡೆ ಕಳ್ಳತನ ಮಾಡಿರುವುದನ್ನು ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪ್ರಕರಣ ಪತ್ತೆಯಲ್ಲಿ ಸಹಕರಿಸಿದ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಬೆರಳಚ್ಚು ವಿಭಾಗ ಮತ್ತು ನಿಸ್ತಂತ್ ವಿಭಾಗದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.