ಹುಬ್ಬಳ್ಳಿ:
ಇದು.. ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ 2007ರಲ್ಲಿ ನಿವೇಶನ ಕಳೆದುಕೊಂಡ ಸಂತ್ರಸ್ತರು ಹುಡಾ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದ ವೇಳೆ ವೃದ್ಧೆ ಹುಡಾ ಅಧ್ಯಕ್ಷ ಶಾಕೀರ ಸನದಿ ಅವರ ಎದುರು ಕಣ್ಣೀರು ಹಾಕಿ ಬೇಡಿಕೊಂಡ ಪರಿ. ಆಗ ಸನದಿ ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲವೆಂದು ಭರವಸೆ ನೀಡುವ ಮೂಲಕ ವೃದ್ಧೆಯನ್ನು ಸಂತೈಸಿದರು.ಹುಡಾ ಎದುರು ಪ್ರತಿಭಟನೆ:
ವಿಮಾನ ನಿಲ್ದಾಣ ವಿಸ್ತರಣೆಯಲ್ಲಿ ವಶಪಡಿಸಿಕೊಂಡ ನಿವೇಶನ ಸಂತ್ರಸ್ತರಿಗೆ ಅಗತ್ಯ ನಿವೇಶನ ಸೇರಿದಂತೆ ಆಗಿರುವ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ, 2007ರಲ್ಲಿ ವಿಮಾನ ನಿಲ್ದಾಣ ಮೇಲ್ದರ್ಜೆಗೆರಿಸಲು ನಿಲ್ದಾಣದ ಸುತ್ತಲಿನ 529 (83 ಮನೆ ಸೇರಿ) ನಿವೇಶನ ಬಿಟ್ಟುಕೊಡಲಾಗಿತ್ತು. ಅಂದಿನ ಸರ್ಕಾರ 2008ರಲ್ಲಿ ನಿವೇಶನ ಕಳೆದುಕೊಂಡವರಿಗೆ ಪ್ರತಿ ಚದರ್ ಅಡಿಗೆ ₹450 ಪರಿಹಾರ ಹಾಗೂ ಬೇರೆಡೆ ನಿವೇಶನ ನೀಡುವಂತೆ ಆದೇಶಿಸಿತ್ತು. ಜತೆಗೆ ಹುಡಾದ ಮೂಲಕ ಪ್ರತಿ ಚದರ್ ಅಡಿಗೆ ₹224 ಭರಿಸಿಕೊಂಡು ನಿವೇಶನ ನೀಡಲು ಆದೇಶಿಸಿತ್ತು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ 163 ಜನರಲ್ಲಿ 70 ಜನರಿಗೆ ನಿವೇಶನ ನೀಡಲಾಗಿದೆ. 2011-12ರಲ್ಲಿ ಏಕಾಏಕಿ ಪ್ರತಿ ಚದರ್ ಅಡಿಗೆ ₹ 485 ಭರಿಸುವಂತೆ ಸೂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, 2008ರಲ್ಲಿ ಆದೇಶ ಹೊರಡಿಸಿದಂತೆ ನಿವೇಶನ ನೀಡುವಂತೆ ಒತ್ತಾಯಿಸಿದರು.24ರಂದು ಚರ್ಚೆ:
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಹುಡಾ ಅಧ್ಯಕ್ಷ ಶಾಕೀರ ಸನದಿ, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೆಲವು ತಾಂತ್ರಿಕ ತೊಂದರೆಗಳಿವೆ. ಈ ಕುರಿತು ಜ. 24ರಂದು ಸಂತ್ರಸ್ತರೊಂದಿಗೆ ಸಭೆ ಕರೆದು ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಶೀಘ್ರ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಶಾಸಕ ಎಂ.ಆರ್. ಪಾಟೀಲ, ಸಂತ್ರಸ್ತರ ಸಮಸ್ಯೆ ಕುರಿತು ಹುಡಾ ಅಧ್ಯಕ್ಷರೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ ವೇಳೆ ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ, ಎಸ್.ಎ. ಜಹಗೀರದಾರ, ಕಾರ್ಯದರ್ಶಿ ಐ.ಬಿ. ಚಡಿಹಾಳ, ಸಹ ಕಾರ್ಯದರ್ಶಿ ಎಂ.ಜಿ. ರಾಯ್ಕರ್, ಸದಸ್ಯರಾದ ಜಿ. ಶಿರೂರ, ಆರ್.ಎಂ. ಅಣ್ವೇಕರ, ಉಮಾದೇವಿ ಬಗಾಡೆ, ಗೀತಾ ಸೋಳಂಕಿ, ರೇಣುಕಾ ಇಂಗಳಳ್ಳಿ, ಮುತ್ತುರಾಜ ಬೆನಕನದೋಣಿ ಸೇರಿದಂತೆ ಹಲವರಿದ್ದರು.