ಕುಷ್ಟಗಿ: ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗಕ್ಕೆ ಬಜೆಟ್ ನಲ್ಲಿ ಅನುದಾನ ಘೋಷಿಸುವುದು ಹಾಗೂ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಜಯಪುರ, ಬಾಗಲಕೋಟೆ, ಕೊಪ್ಪಳದಿಂದ ರಾಜಧಾನಿ ಬೆಂಗಳೂರಿಗೆ ನೇರ ಮಾರ್ಗದ ಸಂಪರ್ಕ ಇಲ್ಲಿಯವರೆಗೂ ಆಗದೇ ಇರುವುದು ಈ ಭಾಗದ ದುರದೃಷ್ಟಕರವೆನಿಸಿದೆ. ಪ್ರಸ್ತುತ ಹುಬ್ಬಳ್ಳಿ ಮಾರ್ಗವಾಗಿ ಇಲ್ಲವೇ ಗುಂತಕಲ್ ಮಾರ್ಗವಾಗಿ ದೂರ ಕ್ರಮಿಸುವ ಸಂಪರ್ಕಿಸುವ ಪರಿಸ್ಥಿತಿ ಈಗಲೂ ಮುಂದುವರೆದಿದೆ. ಆಲಮಟ್ಟಿ-ಚಿತ್ರದುರ್ಗ ಹೊಸ ರೈಲ್ವೆ ಮಾರ್ಗದಿಂದ ವಿಜಯಪುರ, ಬಾಗಲಕೋಟೆ, ಕೊಪ್ಪಳದಿಂದ ಬೆಂಗಳೂರಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ ಎಂದರು.
ಈ ಹೊಸ ಮಾರ್ಗದಿಂದ ಬೆಂಗಳೂರು-ಸೊಲ್ಲಾಪೂರ ಮಾರ್ಗದಲ್ಲಿ ಅಂತರ ಕಡಿಮೆ ಆಗಲಿದ್ದು, ಇದರಿಂದ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ರೈಲು ಮಾರ್ಗವಾಗಿ ಪರಿಣಮಿಸಲಿದೆ. ಕೂಡಲಸಂಗಮ, ಹುನಗುಂದ, ಇಲಕಲ್, ಕುಷ್ಟಗಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿಯಿಂದ ಚಿತ್ರದುರ್ಗ ಸಂಪರ್ಕಿಸಲಿದೆ. ಈ ಮಾರ್ಗದಿಂದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.ಬೇಡಿಕೆಗಳು: ಗದಗ-ವಾಡಿ ರೈಲು ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು. ಗದಗ- ವಾಡಿ ಯೋಜನೆ ಮುಂದುವರಿದ ಕಾಮಗಾರಿ ಕುಷ್ಟಗಿಯಿಂದ ಜುಮ್ಲಾಪೂರ ಕಾಮಗಾರಿ ವಿಳಂಬವಾಗಿದ್ದು ಕಾಮಗಾರಿ ವೇಗಗೊಳಿಸಬೇಕು. ಕುಷ್ಟಗಿಯಿಂದ ಬೆಂಗಳೂರು ರೈಲು ಸಂಚಾರ ಮುಂದಿನ ಜನವರಿ ಹೊಸ ವರ್ಷದಿಂದ ಆರಂಭಿಸಬೇಕು. ದರೋಜಿ-ಬಾಗಲಕೋಟೆ, ಕುಷ್ಟಗಿ-ನರಗುಂದ-ಘಟಪ್ರಭಾ ಹಾಗೂ ಗದಗ-ಕೃಷ್ಣಾಪುರ ಈ ಮಾರ್ಗ ರೈಲು ಯೋಜನೆ ಕೈಗೆತ್ತಿಕೊಳ್ಳಬೇಕು, ಕುಷ್ಟಗಿಯಿಂದ ಹುಬ್ಬಳ್ಳಿಗೆ ಇನ್ನೊಂದು ರೈಲು ಸಂಚಾರ ಸೇವೆ ಕಲ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಆದಪ್ಪ ಎಸ್.ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಹಾಗಲದಾಳ, ಪರಸಪ್ಪ ಅಳ್ಳಳ್ಳಿ, ಉಪಾಧ್ಯಕ್ಷ ಚನ್ನಪ್ಪ ನಾಲಿಗಾರ, ಬಸವರಾಜ ಸೇರಿದಂತೆ ಅನೇಕರು ಇದ್ದರು.