ಗಂಗಾವತಿ: ಭಾರತ್ ಜೋಡೋ ಯುವ ಸಂಘ ಯೋಜನೆ ಯುವ ಸಬಲೀಕರಣಕ್ಕೆ ₹10 ಲಕ್ಷದವರೆಗೆ ನೀಡಲಾಗುತ್ತದೆ ಎಂದು ಪೌರಾಯುಕ್ತ ವಿರೂಪಾಕ್ಷ ಮೂರ್ತಿ ತಿಳಿಸಿದರು.
ಯುವಕರನ್ನು ಸಂಘಟಿಸಿ, ಅವರಲ್ಲಿ ನಾಯಕತ್ವ ಗುಣ ಬೆಳೆಸುವುದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಸೇವೆ, ಸ್ವಚ್ಛತೆ, ಆರೋಗ್ಯ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಯೋಜನೆಯಡಿ ರಾಜ್ಯಾದ್ಯಂತ 10,000 ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲಾಗುತ್ತಿದ್ದು, ಪ್ರತಿ ಸಂಘದ ಕಾರ್ಯಚಟುವಟಿಕೆಗಳಿಗೆ ಸರ್ಕಾರದಿಂದ ₹10 ಲಕ್ಷದವರೆಗೆ ಅನುದಾನ ಒದಗಿಸಲಾಗುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಯುವಕರನ್ನು ಸಂಘಟಿಸಿ ಸ್ಥಳೀಯ ಮಟ್ಟದಲ್ಲಿಯೇ ವಿವಿಧ ಅಭಿವೃದ್ಧಿ ಮತ್ತು ಸಾಮಾಜಿಕ ಚಟುವಟಿಕೆ ಕೈಗೊಳ್ಳಲು ಈ ಸಂಘಗಳು ಪ್ರಮುಖ ವೇದಿಕೆಯಾಗಲಿವೆ ಎಂದರು.16ರಿಂದ 35 ವರ್ಷದೊಳಗಿನ ಯುವಕರು ಸಂಘಗಳ ಸದಸ್ಯರಾಗಲು ಅವಕಾಶವಿದ್ದು, ಕನಿಷ್ಠ 100 ಸದಸ್ಯರನ್ನು ಒಳಗೊಂಡಂತೆ ಸಂಘ ರಚಿಸುವ ಉದ್ದೇಶ ಹೊಂದಲಾಗಿದೆ. ಯುವಕರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಕ್ರೀಡೆ, ಯೋಗ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಚಟುವಟಿಕೆ, ಸ್ವಚ್ಛತಾ ಅಭಿಯಾನ, ಸಾಮಾಜಿಕ ಸಾಮರಸ್ಯ ಹಾಗೂ ಸಾರ್ವಜನಿಕ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.