ಕೊಟ್ಟೂರಿನ ಮೂಲಭೂತ ಸೌಕರ್ಯಗಳಿಗೆ ಅನುದಾನ: ಶಾಸಕ ಕೆ.ನೇಮಿರಾಜ ನಾಯ್ಕ

KannadaprabhaNewsNetwork | Published : Apr 17, 2025 12:08 AM

ಸಾರಾಂಶ

ಪಟ್ಟಣದಲ್ಲಿನ 20 ವಾರ್ಡ್‌ಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನೆರೆಡು ತಿಂಗಳಲ್ಲಿ ಅನುದಾನ ಕಲ್ಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಪಟ್ಟಣದಲ್ಲಿನ 20 ವಾರ್ಡ್‌ಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನೆರೆಡು ತಿಂಗಳಲ್ಲಿ ಅನುದಾನ ಕಲ್ಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಪಟ್ಟಣದ ವಾರ್ಡ್ ಸಂಖ್ಯೆ 8, 10, 12 ಮತ್ತು 16ರಲ್ಲಿ ₹1.32 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ 40 ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಹಿಂಭಾಗದ ರಸ್ತೆ ಈವರೆಗೂ ಅಭಿವೃದ್ಧಿಯಾಗಿರಲಿಲ್ಲ. ಇದೀಗ ರಸ್ತೆಯನ್ನು ಸಿಸಿಯನ್ನಾಗಿಸಲಾಗುವುದು. ಅದರಂತೆ ಬಸವೇಶ್ವರ ಬಡಾವಣೆ, ದ.ರಾ. ಬೇಂದ್ರೆ ಶಾಲೆ, ಹಳೆ ಶೆಟ್ಟಿ ಹೋಟೆಲ್, ಬಾಲಾಜಿ ಕಲ್ಯಾಣ ಮಂಟಪ ರಸ್ತೆಗಳನ್ನು ಕೆಕೆಆರ್‌ಡಿಬಿ ಮತ್ತು ಡಿಎಂಎಫ್ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು. ಇನ್ನೆರಡು ತಿಂಗಳಲ್ಲಿ ವಾರ್ಡಗೆ ಕೋಟಿ ರೂ.ಗಳಂತೆ ಅನುದಾನ ಕಲ್ಪಿಸಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು.

ತುಂಗಭದ್ರಾ ನದಿ ಹಿನ್ನೀರಿನ ಬನ್ನಿಗೋಳು ಜಾಕ್‌ವೆಲ್‌ನಿಂದ ಸದ್ಯ ಹ.ಬೊ.ಹಳ್ಳಿ, ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಅಮೃತ ಯೋಜನೆಯಡಿ ಪಟ್ಟಣಕ್ಕೆ ತುಂಗಭದ್ರಾ ನದಿ ಹಿನ್ನೀರಿನಿಂದ ಪ್ರತ್ಯೇಕವಾಗಿ ಕುಡಿವ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದೆ. ಸರಬರಾಜು ಪೈಪ್‌ಗಳ ಸುತ್ತ ಸಿಮೆಂಟ್ ಹಾಕುವ ಕೆಲಸ ನಡದಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಕೊಟ್ಟೂರು ಪಟ್ಟಣದಲ್ಲಿ ನೀರಿನ ಸಮಸ್ಯೆ ತಪ್ಪಲಿದೆ. ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸಿ ಶೀಘ್ರ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಪಪಂ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ, ಮಾಜಿ ಸದಸ್ಯ ಪಿ. ಸುಧಾಕರಗೌಡ ಪಾಟೀಲ್, ಕೊಟ್ರೇಶ್ ಕಾಮಶೆಟ್ಟಿ, ಮುಖಂಡರಾದ ಗಂಗಮ್ಮನಹಳ್ಳಿ ಬಸವರಾಜ, ಎ. ಮಹಾಂತೇಶ, ಜಿ. ಕಾರ್ತಿಕ, ಎನ್. ಅಪ್ಪಾಜಿ , ಟೈಲರ್ ಕೊಟ್ರೇಶ್ ಸೇರಿ ಅನೇಕರು ಇದ್ದರು.

Share this article