ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಸೂರ್ಲಬ್ಬಿ ಬೂತ್ ಕಾಂಗ್ರೆಸ್ ಸಭೆಯು ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್ ಅವರ ನೇತೃತ್ವದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಸೂರ್ಲಬ್ಬಿ ಬೂತ್ ಕಾಂಗ್ರೆಸ್ ಸಭೆಯು ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್ ಅವರ ನೇತೃತ್ವದಲ್ಲಿ ನಡೆಯಿತು. ಬಿ.ಬಿ. ಸತೀಶ್ ಅವರು ಮಾತನಾಡಿ, ಅತಿ ಹೆಚ್ಚು ಮಳೆಯಾಗುವ ಸೂರ್ಲಬ್ಬಿ ನಾಡಿನ ಜನರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಶಾಸಕ ಡಾ. ಮಂತರ್ ಗೌಡ ಮಾಡುತ್ತಿದ್ದಾರೆ. ಇಲ್ಲಿನ ಪಕ್ಷದ ಕಾರ್ಯಕರ್ತರು ಅಭಿವೃದ್ದಿ ಪಟ್ಟಿಯನ್ನು ಶಾಸಕರಿಗೆ ನೀಡಿದ್ದಾರೆ. ಅದರಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಅನುದಾನ ಕಲ್ಪಿಸಲಾಗುತ್ತದೆ ಎಂದು ಹೇಳಿದರು.ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡ ಹಾಗೂ ಹಿಂದುಳಿದ ವರ್ಗಗಳಿಗೆ ಸಾಕಷ್ಟು ನೆರವಾಗುತ್ತಿವೆ. ಅಂತಹ ಯೋಜನೆಗಳನ್ನು ಟೀಕೆ ಮಾಡುತ್ತ, ಗ್ಯಾರಂಟಿಯನ್ನು ನಿಲ್ಲಿಸುವ ಪ್ರಯತ್ನವನ್ನು ಬೇರೆ ಪಕ್ಷಗಳು ಮಾಡುತ್ತಿವೆ. ಜನಸಾಮಾನ್ಯರ ಜೀವನ ಮಟ್ಟವನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಸರ್ಕಾರದ ಈ ಯೋಜನೆಗಳು ಪರಿಣಾಮಕಾರಿಯಾಗಿವೆ. ಗ್ರಾಮೀಣ ಭಾಗದ ಜನರಿಗೂ ಗ್ಯಾರಂಟಿ ಯೋಜನೆಗಳು ಅತ್ಯವಶ್ಯಕವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ತಿಳಿದಿದೆ ಎಂದು ಹೇಳಿದರು. ಶಾಸಕ ಡಾ. ಮಂತರ್ ಗೌಡರ ನೇತೃತ್ವದಲ್ಲಿ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ರಸ್ತೆ, ಕುಡಿಯುವ ನೀರು, ಮೂಲ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಅನುಕೂಲವಾಗುವಂತೆ ಕೈಗೊಳ್ಳಲಾಗುತ್ತಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.ವಿಧಾನಸಭೆಯಲ್ಲಿ ವಿಶೇಷವಾಗಿ ೯೪ಸಿ ಮತ್ತು ೯೪ಸಿಸಿ ಅರ್ಜಿಗಳ ಸ್ವೀಕಾರದ ವಿಷಯದಲ್ಲಿ ಸಮಗ್ರವಾದ ವಾದ ಮಂಡಿಸಿ, ಕ್ಷೇತ್ರದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಕಾರ್ಯಕರ್ತರು ಇನ್ನಷ್ಟು ಸಂಘಟಿತರಾಗಿ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬ ಕಾರ್‍ಯಕರ್ತರು ಜನರ ಸಂಪರ್ಕವನ್ನು ವಿಸ್ತರಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.ಸಭೆಯಲ್ಲಿ ಗರ್ವಾಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಓಂಕಾರಪ್ಪ, ಪಕ್ಷದ ಪ್ರಮುಖರಾದ ನಟೇಶ್, ಸೀತಮ್ಮ, ಗಣೇಶ್, ನಾಣಿಯಪ್ಪ, ರಫೀಕ್, ಕಾರ್‍ಯಕರ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.