ನದಿ ನೀರು ಪೂರೈಕೆಗೆ ಬೇಕಿದೆ ಅನುದಾನ

KannadaprabhaNewsNetwork |  
Published : Feb 27, 2026, 02:15 AM IST
1)- 26ಎಚ್ ಆರ್ ಪಿ 1 -ಹರಪನಹಳ್ಳಿ ನಗರಕ್ಕೆ ತುಂಗಭದ್ರ ನದಿ ನೀರು ಸರಬರಾಜು ಮಾಡುವ ಗರ್ಭಗುಡಿ ಗ್ರಾಮದ ಬಳಿ ಇರುವ ಜಾಕ್ ವೆಲ್  | Kannada Prabha

ಸಾರಾಂಶ

ಮರಳು ಮಿಶ್ರಿತ ಕೆಂಪು ಮಣ್ಣು, ಬಹುತೇಕ ಮಳೆ ಆಶ್ರಿತ ಬೆಳೆ, ಹೆಚ್ಚಿನ ಸಂಖ್ಯೆಯಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಇಂತಹ ಹಿಂದುಳಿದ ತಾಲೂಕಿಗೆ ಇನ್ನೂ ಮೂಲಭೂತ ಸೌಕರ್ಯ ಸಿಗಬೇಕಾಗಿದೆ.

ಬಿ.ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ಡಾ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ತಾಲೂಕು ಸಹ ಒಂದು. ಇದು ಪಾಳೇಗಾರರು ಆಳಿದ ನಾಡು. ಇಂತಹ ತಾಲೂಕು ಅಲ್ಪ ಸ್ವಲ್ಪ ಅಭಿವೃದ್ಧಿ ಸಾದಿಸಿದ್ದರೂ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.

ಹರಪನಹಳ್ಳಿ ತಾಲೂಕು 1429.65 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, 232 ಗ್ರಾಮಗಳು, 37 ಗ್ರಾಪಂಗಳನ್ನು ಒಳಗೊಂಡಿದೆ. ಮರಳು ಮಿಶ್ರಿತ ಕೆಂಪು ಮಣ್ಣು, ಬಹುತೇಕ ಮಳೆ ಆಶ್ರಿತ ಬೆಳೆ, ಹೆಚ್ಚಿನ ಸಂಖ್ಯೆಯಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಇಂತಹ ಹಿಂದುಳಿದ ತಾಲೂಕಿಗೆ ಇನ್ನೂ ಮೂಲಭೂತ ಸೌಕರ್ಯ ಸಿಗಬೇಕಾಗಿದೆ.

ಹರಪನಹಳ್ಳಿ ಪುರಸಭೆ ಮೇಲ್ದರ್ಜೆಗೇರಿ ಈಚೆಗೆ ನಗರಸಭೆಯಾಗಿದೆ. ಅನೇಕ ವರ್ಷಗಳ ಹಿಂದೆ ಕೈಗೊಂಡ ಇಲ್ಲಿಯ ಒಳಚರಂಡಿ ಯೋಜನೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಅದೇ ರೀತಿ ಗರ್ಭಗುಡಿ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಿಂದ ಹರಪನಹಳ್ಳಿ ನಗರಕ್ಕೆ ನೀರು ಸರಬರಾಜು ಪ್ರಕ್ರಿಯೆ ಆರಂಭಗೊಂಡು ಸುಮಾರು ವರ್ಷಗಳೇ ಕಳೆದರೂ ಇನ್ನೂ ನಗರದ ಕೆಲವೊಂದು ಭಾಗದ ಜನರು ನದಿ ನೀರು ಕುಡಿಯುತ್ತಾ ಇಲ್ಲ.

ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದೆ. ಈಗಾಗಲೇ ಪೂರ್ಣಗೊಂಡಿರುವ ಕಡೆ ಜನರು ತಾವು ತಾವೇ ಸಂಪರ್ಕ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಯುಜಿಡಿ ಅವ್ಯವಸ್ಥೆಯಿಂದ ಕೂಡಿದೆ.

ಈ ಬಜೆಟ್ ನಲ್ಲಿಯಾದರೂ ಉಳಿದಿರುವ 32 ಕಿಲೋ ಮೀಟರ್‌ ನಷ್ಟು ಒಳಚರಂಡಿ ಕಾಮಗಾರಿ ಮಾಡಲು ಹಾಗೂ ಸಮರ್ಪಕವಾಗಿ ಈ ಯೋಜನೆ ಅನುಷ್ಠಾನಗೊಳಿಸಿ ಉದ್ಘಾಟಿಸಲು ಅನುದಾನ ಬೇಕಿದೆ. ನದಿ ನೀರು ಇನ್ನೂ ನಗರದ 12 ಸಾವಿರ ಮನೆಗಳಿಗೆ ಸರಬರಾಜು ಆಗುತ್ತಿಲ್ಲ. 12 ಸಾವಿರ ಮನೆಗಳಿಗೆ ನದಿ ನೀರು ಸರಬರಾಜು ಮಾಡಲು ಹಾಗೂ ನದಿಯಿಂದ ನೀರು ಪೂರೈಕೆಯಾಗುವ ಪೈಪ್‌ಲೈನ್ ದುರಸ್ತಿ ಕಾಮಗಾರಿ ಕೈಗೊಳ್ಳಲು ಅನುದಾನ ಬೇಕಾಗಿದೆ.

ಇವುಗಳ ಜೊತೆಗೆ ನದಿಯಿಂದ ಎರಡನೇ ಹಂತದ ನೀರು ಪೂರೈಕೆ ಯೋಜನೆ ಸಾಕಾರಗೊಳ್ಳಬೇಕಿದೆ. ಹಿಂದುಳಿದ ತಾಲೂಕಿಗೆ ಸಣ್ಣ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ.

ಆರ್ಥಿಕವಾಗಿ ಹಿಂದುಳಿದಿದ್ದರೂ ಶೈಕ್ಷಣಿಕ, ಧಾರ್ಮಿಕವಾಗಿ ಹರಪನಹಳ್ಳಿ ತಾಲೂಕು ಪ್ರಸಿದ್ಧಿ ಪಡೆದಿದೆ. ಏಳುಸುತ್ತಿನ ಕೋಟೆ ಹೊಂದಿ ಪ್ರತಿ ಮಂಗಳವಾರ, ಶುಕ್ರವಾರ ಸಾವಿರಾರು ಭಕ್ತರು, ಹುಣ್ಣಿಮೆ ಹಾಗೂ ಜಾತ್ರಾ ಸಮಯದಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ಧ ಉಚ್ಚಂಗೆಮ್ಮ ದೇವಾಲಯವನ್ನು, ಕೋಟೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ.

ಬಾಗಳಿ, ನೀಲಗುಂದ, ಚಿಗಟೇರಿ ಮುಂತಾದ ಧಾರ್ಮಿಕ ಪ್ರಸಿದ್ಧ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ತಾಲೂಕಿನಲ್ಲಿ ರಾಜ್ಯ, ಅಂತರ ರಾಜ್ಯ ಮಟ್ಟದ ಕ್ರೀಡಾಪಟುಗಳಿದ್ದು, ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ. ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಬೇಕಿದೆ.

ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯ 7 ಗ್ರಾಪಂಗಳು ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಅರಸೀಕೆರೆ ಹೋಬಳಿ ಸಹ ಹಿಂದುಳಿದಿದೆ. ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗ ಅರಸೀಕೆರೆ ಹೋಬಳಿಗೆ ಬರುತ್ತದೆ.

ಮೇಲೆ ತಿಳಿಸಿದ ಅನೇಕ ಯೋಜನೆ, ಕೆಲಸ ಕಾರ್ಯಗಳಲ್ಲಿ ಕೆಲವೊಂದನ್ನಾದರೂ ಈ ಬಜೆಟ್ ನಲ್ಲಿ ಘೋಷಿಸಿ ಜಾರಿ ಮಾಡಿದರೆ ಇಂತಹ ಹಿಂದುಳಿದ ತಾಲೂಕು ಅಭಿವೃದ್ಧಿ ಪಥದತ್ತ ಸಾಗಬಹುದು. ಆ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.

ನದಿ ನೀರು ಹರಪನಹಳ್ಳಿ ನಗರದ ಇನ್ನೂ 12 ಸಾವಿರ ಮನೆಗಳಿಗೆ ತಲುಪಬೇಕಾಗಿದೆ. ಒಳಚರಂಡಿ ಕಾಮಗಾರಿ ಇನ್ನೂ 32 ಕಿ.ಮೀ. ಆಗಬೇಕಿದೆ. ಈ ಎರಡೂ ಕೆಲಸಗಳಿಗೆ ಆದ್ಯತೆ ನೀಡಿ ₹125 ಕೋಟಿ ಅನುದಾನಕ್ಕಾಗಿ ಈ ಬಾರಿಯ ಬಜೆಟ್ ನಲ್ಲಿ ಸೇರ್ಪಡೆಗೊಳಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಹೋಳಿ ಆಚರಣೆಗೆ ಹಲವು ಕಾರ್ಯಕ್ರಮ
ಪರಿಸರ ಕಾಪಾಡುವಲ್ಲಿ ವಿಫಲವಾಗಿದ್ದಕ್ಕೆ ಭೂಕುಸಿತ, ಪ್ರವಾಹ